ಐಪಿಎಲ್ 2025: ದಾಖಲೆಯ 84,000 ಕೋಟಿ ನಿಮಿಷ ವೀಕ್ಷಣೆ

PC : IPL
ಮುಂಬೈ: 2025ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಪ್ರಥಮ ಪ್ರಶಸ್ತಿಯನ್ನು ಗೆದ್ದಿತು. ಜೊತೆಗೆ, ಈ ಪಂದ್ಯಾವಳಿಯನ್ನು ದಾಖಲೆಯ ಸಮಯ ವೀಕ್ಷಿಸಲಾಯಿತು.
2025ರ ಐಪಿಎಲ್ ಪಂದ್ಯಾವಳಿಯನ್ನು ಟೆಲಿವಿಶನ್ ಮತ್ತು ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಮುಂತಾದ ಇಂಟರ್ನೆಟ್ ಆಧಾರಿತ ಸಾಧನಗಳ ಮೂಲಕ 84,000 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಿಸಲಾಯಿತು ಎಂದು ಅಧಿಕೃತ ಪ್ರಸಾರಕ ಜಿಯೋಸ್ಟಾರ್ ತಿಳಿಸಿದೆ.
ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯವು ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ವೀಕ್ಷಣೆಗೊಳಗಾದ ಟಿ20 ಪಂದ್ಯವಾಯಿತು. ಆ ಪಂದ್ಯವನ್ನು ವಿವಿಧ ಮಾಧ್ಯಮಗಳ ಮೂಲಕ 3170 ಕೋಟಿ ನಿಮಿಷಗಳ ಕಾಲ ವೀಕ್ಷಿಸಲಾಯಿತು. ಟಿವಿಯಲ್ಲಿ ಆ ಪಂದ್ಯವನ್ನು 16.9 ಕೋಟಿ ಜನರು ವೀಕ್ಷಿಸಿದರು. ಡಿಜಿಟಲ್ ಸಾಧನಗಳಲ್ಲಿ ಪಂದ್ಯವು 89.2 ಕೋಟಿ ವೀಡಿಯೊ ವೀಕ್ಷಣೆ ಪಡೆಯಿತು. ಅತ್ಯಂತ ನಿಬಿಡ ಅವಧಿಯಲ್ಲಿ ಡಿಜಿಟಲ್ ಮಾಧ್ಯಮಗಳ ಮೂಲಕ ಏಕಕಾಲದಲ್ಲಿ 5.5 ಕೋಟಿ ವೀಕ್ಷಕರು ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಕಳೆದ ವರ್ಷಕ್ಕೆ ಹೋಲಿಸಿದರೆ, ಜಿಯೋಸ್ಟಾರ್ನ ಡಿಜಿಟಲ್ ವೀಕ್ಷಣೆಯಲ್ಲಿ ಈ ಬಾರಿ 29 ಶೇಕಡ ಏರಿಕೆಯಾಗಿದೆ.
ಟೆಲಿವಿಶನ್ ವಿಭಾಗದಲ್ಲಿ, ಸ್ಟಾರ್ಸ್ಪೋರ್ಟ್ಸ್ನಲ್ಲಿ ಪ್ರೇಕ್ಷಕರು 45,600 ನಿಮಿಷಗಳ ಕಾಲ ಐಪಿಎಲ್ ನೇರಪ್ರಸಾರವನ್ನು ವೀಕ್ಷಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠವಾಗಿದೆ.





