ದಾಖಲೆ ಮೊತ್ತಕ್ಕೆ ಹರಾಜಾಗಿ ಇತಿಹಾಸ ನಿರ್ಮಿಸಿದ ಲಂಕಾದ ವೇಗಿ ಮಥೀಶ ಪಥಿರನ

ಮಥೀಶ ಪಥಿರನ | Photo: PTI
ಅಬುಧಾಬಿ,ಡಿ.16: ಮುಂಬರುವ ಐಪಿಎಲ್ ಋತುವಿಗಿಂತ ಮೊದಲು ತನ್ನ ತಂಡವನ್ನು ಬಲಿಷ್ಠಗೊಳಿಸಲು ಭಾರೀ ಹಣ ಹೂಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಂಗಳವಾರ ನಡೆದ ಮಿನಿ ಐಪಿಎಲ್ ಹರಾಜಿನಲ್ಲಿ ಸುದ್ದಿಯಾಗಿದೆ.
ಕೆಕೆಆರ್ ಫ್ರಾಂಚೈಸಿಯು 25.20 ಕೋಟಿ ರೂ.ಗೆ ಆಸ್ಟ್ರೇಲಿಯದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮೊದಲಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ತಮ್ಮದೇ ದೇಶದ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ದಾಖಲೆ(24.75 ಕೋಟಿ ರೂ.)ಯನ್ನು ಮುರಿದ ಗ್ರೀನ್ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶೀ ಆಟಗಾರನಾಗಿದ್ದಾರೆ.
ಗ್ರೀನ್ರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಕೆಕೆಆರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ತೀವ್ರ ಬಿಡ್ಡಿಂಗ್ ವಾರ್ ನಡೆಯಿತು. ಅಂತಿಮವಾಗಿ CSKಯನ್ನು ಹಿಂದಿಕ್ಕಿದ ಕೆಕೆಆರ್ ವಿಜಯಶಾಲಿಯಾಯಿತು.
ಕೆಕೆಆರ್ ತಂಡ ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರನ ಅವರನ್ನು 18 ಕೋಟಿ ರೂ. ನೀಡಿ ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿ ಪಥಿರನ ಅತ್ಯಂತ ದುಬಾರಿ ಶ್ರೀಲಂಕಾ ಆಟಗಾರ ಎನಿಸಿಕೊಂಡರು. ಪಥಿರನ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಿದ್ದರು.
*RCBಗೆ ವೆಂಕಟೇಶ್ ಅಯ್ಯರ್: ಕೆಕೆಆರ್ ತಂಡ ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮೇಲೆ ಆಸಕ್ತಿ ತೋರಿತ್ತು. ಮತ್ತೊಂದು ಪ್ರಮುಖ ಹೆಜ್ಜೆಯೊಂದರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ತಂಡವು 7 ಕೋಟಿ ರೂ.ಗೆ ಅಯ್ಯರ್ ರನ್ನು ಖರೀದಿಸಿತು.
ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವೆಂಕಟೇಶ್ 29.12ರ ಸರಾಸರಿಯಲ್ಲಿ, 137ಕ್ಕೂ ಅಧಿಕ ಸ್ಟ್ರೈಕ್ರೇಟ್ ನಲ್ಲಿ 1,468 ರನ್ ಗಳಿಸಿದ್ದಾರೆ. 56 ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಹಿಂದಿನ ವರ್ಷ ಕೆಕೆಆರ್ ತಂಡಕ್ಕೆ 23.75 ಕೋಟಿ ರೂ.ಗೆ ಹರಾಜಾಗಿದ್ದ ವೆಂಕಟೇಶ್ ಏಳು ಇನಿಂಗ್ಸ್ಗಳಲ್ಲಿ 20ರ ಸರಾಸರಿಯಲ್ಲಿ ಒಂದು ಅರ್ಧಶತಕ ಸಹಿತ 142 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ವೆಂಕಟೇಶ್ T20 ಕ್ರಿಕೆಟ್ ನಲ್ಲಿ 144 ಪಂದ್ಯಗಳಲ್ಲಿ 34.18ರ ಸರಾಸರಿಯಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳ ಸಹಿತ 3,179 ರನ್ ಗಳಿಸಿದ್ದಾರೆ. 55 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ 211 ರನ್ ಗಳಿಸಿದ್ದಾರೆ.
ನ್ಯೂಝಿಲ್ಯಾಂಡ್ನ ವೇಗದ ಬೌಲರ್ ಜೇಕಬ್ ಡಫಿ RCB ತಂಡದ ಪಾಲಾಗಿದ್ದಾರೆ. ಡಫಿ 2025ರಲ್ಲಿ ಇಂಟರ್ನ್ಯಾಶನಲ್ ಕ್ರಿಕೆಟ್ ನಲ್ಲಿ 35 ಪಂದ್ಯಗಳಲ್ಲಿ 72 ವಿಕೆಟ್ ಗಳನ್ನು ಪಡೆದಿದ್ದಾರೆ. ಇದರಲ್ಲಿ 3 ನಾಲ್ಕು ವಿಕೆಟ್ ಗೊಂಚಲು ಹಾಗೂ 2 ಐದು ವಿಕೆಟ್ ಗೊಂಚಲು ಇದೆ. T20 ವೃತ್ತಿಜೀವನದಲ್ಲಿ ಡಫಿ 156 ಪಂದ್ಯಗಳಲ್ಲಿ 178 ವಿಕೆಟ್ ಗಳನ್ನು ಪಡೆದಿದ್ದಾರೆ.
ಪಥಿರನ ಈ ಹಿಂದಿನ ಐಪಿಎಲ್ ಅಭಿಯಾನದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 2025ರ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿದ್ದ ಪಥಿರನ 10.14ರ ಇಕಾನಮಿ ರೇಟ್ ನಲ್ಲಿ 13 ವಿಕೆಟ್ ಗಳನ್ನು ಪಡೆದಿದ್ದರು. ಒಟ್ಟು 32 ಐಪಿಎಲ್ ಪಂದ್ಯಗಳನ್ನು ಆಡಿರುವ ಪಥಿರನ 8.68ರ ಇಕಾನಮಿ ರೇಟ್ ನಲ್ಲಿ 47 ವಿಕೆಟ್ ಗಳನ್ನು ಉರುಳಿಸಿದ್ದರು. ವೇಗ, ಬೌನ್ಸ್ ಹಾಗೂ ತೀವ್ರ ಒತ್ತಡದ ಪರಿಸ್ಥಿತಿಯಲ್ಲೂ ಬೌಲಿಂಗ್ ಮಾಡಬಲ್ಲ ತನ್ನ ಸಾಮರ್ಥ್ಯದ ಮೂಲಕ ಪ್ರಸಿದ್ಧಿ ಪಡೆದಿರುವ ಪಥಿರನ ಕೆಕೆಆರ್ ಬೌಲಿಂಗ್ ದಾಳಿಗೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ.
ಕ್ಯಾಮರೂನ್ ಗ್ರೀನ್ ಅವರ ಒಪ್ಪಂದವು ವಿದೇಶಿ ಆಟಗಾರರ ನಿಯಮಗಳನ್ನು ಅನುಸರಿಸಲಿದೆ. ಈ ನಿಯಮದ ಪ್ರಕಾರ 18 ಕೋಟಿ ರೂ.(1.9 ಮಿಲಿಯನ್ ಡಾಲರ್)ಗ್ರೀನ್ ಗೆ ನೇರವಾಗಿ ತಲುಪಲಿದ್ದು, ಇನ್ನುಳಿದ ಮೊತ್ತವು ಬಿಸಿಸಿಐನ ಆಟಗಾರರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆಯಾಗಲಿದೆ.
ಗ್ರೀನ್ ಅವರು ಈ ತನಕ 29 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಒಟ್ಟು 707 ರನ್ ಹಾಗೂ 16 ವಿಕೆಟ್ ಗಳನ್ನು ಕಬಳಿಸಿದ್ದಾರೆ.
2023ರಲ್ಲಿ ಮೊದಲ ಬಾರಿ ಐಪಿಎಲ್ ನಲ್ಲಿ ಆಡಿದ್ದ ಗ್ರೀನ್ ಅವರನ್ನು ಮುಂಬೈ ತಂಡವು 17.5 ಕೋಟಿ ರೂ.ಗೆ ಖರೀದಿಸಿತ್ತು. 2023ರಲ್ಲಿ ಗ್ರೀನ್ 452 ರನ್ ಗಳಿಸಿದ್ದರು. 2024ರ ಐಪಿಎಲ್ ಟೂರ್ನಿಯಲ್ಲಿ 17.5 ಕೋಟಿ ರೂ.ಗೆ RCB ಪಾಲಾಗಿದ್ದ ಗ್ರೀನ್ ಅವರು 255 ರನ್ ಗಳಿಸಿದ್ದಲ್ಲದೆ 10 ವಿಕೆಟ್ ಗಳನ್ನು ಕಬಳಿಸಿದ್ದರು. ಬೆನ್ನುನೋವಿನಿಂದಾಗಿ 2025ರ ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದಿದ್ದರು.
ಇತ್ತೀಚೆಗೆ ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಪೃಥ್ವಿ ಶಾ ಹಾಗೂ ಸರ್ಫರಾಝ್ ಖಾನ್ ಹರಾಜಾಗದೆ ಉಳಿದರು. ಅತಿ ಮುಖ್ಯವಾಗಿ ಸರ್ಫರಾಝ್ ಅವರು ಮುಂಬೈನಲ್ಲಿ ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ 22 ಎಸೆತಗಳಲ್ಲಿ 73 ರನ್ ಗಳಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತ್ತು.
ದಕ್ಷಿಣ ಆಫ್ರಿಕಾದ ಹಿರಿಯ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 1 ಕೋಟಿ ರೂ. ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಾದರು.
ಮಿನಿ ಐಪಿಎಲ್ ಹರಾಜಿನ ಕಣದಲ್ಲಿ 246 ಭಾರತೀಯರು ಹಾಗೂ 113 ವಿದೇಶಿ ಆಟಗಾರರು ಸಹಿತ ಒಟ್ಟು 359 ಆಟಗಾರರಿದ್ದರು. 10 ಫ್ರಾಂಚೈಸಿಗಳು 77 ಸ್ಥಾನಗಳನ್ನು ಭರ್ತಿ ಮಾಡಲು ಎದುರು ನೋಡುತ್ತಿದ್ದು, 31 ಸ್ಥಾನಗಳು ವಿದೇಶೀ ಆಟಗಾರರಿಗೆ ಮೀಸಲಾಗಿದೆ.







