ಐಪಿಎಲ್: ಹಾರ್ದಿಕ್ ಪಾಂಡ್ಯ–ಅರ್ಷದೀಪ್ ಸಿಂಗ್ ವಿನಿಮಯಕ್ಕೆ ಬಿಸಿಸಿಐ ಅನುಮೋದನೆ; ಅಧಿಕೃತ ಘೋಷಣೆ ಬಾಕಿ

ಹಾರ್ದಿಕ್ ಪಾಂಡ್ಯ–ಅರ್ಷದೀಪ್ ಸಿಂಗ್ | Photo Credit : PTI
ಮುಂಬೈ: ಐಪಿಎಲ್ ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಮತ್ತು ಪಂಜಾಬ್ ಕಿಂಗ್ಸ್ ತಂಡದ ಅರ್ಷದೀಪ್ ಸಿಂಗ್ ಅವರ ಆಟಗಾರರ ವಿನಿಮಯ ಒಪ್ಪಂದಕ್ಕೆ ಬಿಸಿಸಿಐ ಅಧಿಕೃತ ಅನುಮೋದನೆ ನೀಡಿದೆ ಎಂದು Cricbuzz ವರದಿ ಮಾಡಿದೆ.
ಈ ಒಪ್ಪಂದದ ಪ್ರಕಾರ, ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಲಿದ್ದಾರೆ. ಉಭಯ ಫ್ರಾಂಚೈಸಿಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ಬಿಸಿಸಿಐ ಮತ್ತು ಸಂಬಂಧಪಟ್ಟ ಫ್ರಾಂಚೈಸಿಗಳ ಆಂತರಿಕ ಮೂಲಗಳನ್ನು ಉಲ್ಲೇಖಿಸಿ Cricbuzz ಈ ಮಾಹಿತಿ ಪ್ರಕಟಿಸಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಆಟಗಾರರ ವಿನಿಮಯಕ್ಕೆ ಅಗತ್ಯವಿದ್ದ ಅಂತಿಮ ಅನುಮೋದನೆ ದೊರೆತಿದೆ ಎನ್ನಲಾಗಿದ್ದು, ಈ ಕುರಿತು ಎರಡೂ ಫ್ರಾಂಚೈಸಿಗಳಿಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆಟಗಾರರ ವಿನಿಮಯ ಒಪ್ಪಂದದಲ್ಲಿ ಇಬ್ಬರ ಸಂಭಾವನೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗುತ್ತಿದ್ದ 16.35 ಕೋಟಿ ರೂಪಾಯಿ ಸಂಭಾವನೆಯೇ ಪಂಜಾಬ್ ಕಿಂಗ್ಸ್ ತಂಡದಲ್ಲಿಯೂ ಮುಂದುವರಿಯಲಿದೆ.
ಅದೇ ರೀತಿ, ಅರ್ಷದೀಪ್ ಸಿಂಗ್ ಅವರ 18 ಕೋಟಿ ರೂಪಾಯಿ ಸಂಭಾವನೆಯಲ್ಲಿಯೂ ಯಾವುದೇ ಬದಲಾವಣೆಯಾಗುವುದಿಲ್ಲ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿ ಅರ್ಷದೀಪ್ ಅವರನ್ನು 18 ಕೋಟಿ ರೂಪಾಯಿಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿರುವ ಅರ್ಷದೀಪ್ ಅದೇ ಸಂಭಾವನೆಯನ್ನು ಪಡೆಯಲಿದ್ದಾರೆ.
ಸುಮಾರು ಒಂದು ವಾರದ ಹಿಂದೆಯೇ ಈ ಆಟಗಾರರ ವಿನಿಮಯದ ಕುರಿತು ಉಭಯ ಫ್ರಾಂಚೈಸಿಗಳ ನಡುವೆ ಮಾತುಕತೆ ಆರಂಭವಾಗಿತ್ತು. ಆದರೆ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಲು ಆಟಗಾರರು ಸಮಯ ತೆಗೆದುಕೊಂಡಿದ್ದರಿಂದ ಪ್ರಕ್ರಿಯೆ ವಿಳಂಬವಾಗಿತ್ತು ಎಂದು ವರದಿಯಾಗಿದೆ.
ಬಳಿಕ ಎರಡೂ ಫ್ರಾಂಚೈಸಿಗಳು ತಮ್ಮ ಆಟಗಾರರೊಂದಿಗೆ ಮತ್ತಷ್ಟು ಚರ್ಚೆ ನಡೆಸಿದ್ದು, ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ವಿನಿಮಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಉಭಯ ಫ್ರಾಂಚೈಸಿಗಳು ಬಿಸಿಸಿಐಗೆ ತಮ್ಮ ಸಮ್ಮತಿಯನ್ನು ಅಧಿಕೃತವಾಗಿ ಸಲ್ಲಿಸಿದ್ದವು.
ಇದೀಗ ಬಿಸಿಸಿಐ ಅನುಮೋದನೆ ದೊರೆತಿರುವುದರಿಂದ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಂದ ಅಧಿಕೃತ ಘೋಷಣೆ ಹೊರಬೀಳುವುದು ಮಾತ್ರ ಬಾಕಿಯಿದೆ.






