ಚಿನ್ನಸ್ವಾಮಿ ಬಿಟ್ಟು ನಾಲ್ಕನೇ ಬಾರಿ ಮೋದಿ ಮೈದಾನಲ್ಲಿ ಐಪಿಎಲ್ ಫೈನಲ್!

Photo Credit : PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿಯ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಘೋಷಿಸಿದೆ. ಮೇ 31ರಂದು ಫೈನಲ್ ಪಂದ್ಯ ನಡೆಯಲಿದ್ದು, ಕಳೆದ ಐದು ಆವೃತ್ತಿಗಳಲ್ಲಿ ನಾಲ್ಕನೇ ಬಾರಿ ಇದೇ ಮೈದಾನಕ್ಕೆ ಅಂತಿಮ ಹಣಾಹಣಿಯ ಆತಿಥ್ಯ ಸಿಕ್ಕಿದೆ.
ಸಾಮಾನ್ಯವಾಗಿ ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲೇ ಫೈನಲ್ ಪಂದ್ಯ ಆಯೋಜಿಸುವುದು ಐಪಿಎಲ್ನ ಸಂಪ್ರದಾಯವಾಗಿದೆ. ಹೀಗಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ತವರು ಮೈದಾನವಾದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಕಡಿಮೆ ಆಸನ ಸಾಮರ್ಥ್ಯ, ಕಳೆದ ವರ್ಷ ನಡೆದಿದ್ದ ಕಾಲ್ತುಳಿತ ಪ್ರಕರಣ ಹಾಗೂ ಶಾಸಕರ ಟಿಕೆಟ್ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಈ ಬಾರಿ ಫೈನಲ್ ಪಂದ್ಯವನ್ನು ಮತ್ತೆ ಅಹಮದಾಬಾದ್ಗೆ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಹಮದಾಬಾದ್ನ ಮೊಟೆರಾ ಪ್ರದೇಶದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಂಕೀರ್ಣದ ಭಾಗವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣದ ಮರುನಿರ್ಮಾಣ ಕಾಮಗಾರಿಯನ್ನು 2015ರಲ್ಲಿ ಆರಂಭಿಸಲಾಗಿತ್ತು. ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕ್ರೀಡಾಂಗಣವನ್ನು 2020ರಲ್ಲಿ ಉದ್ಘಾಟಿಸಲಾಗಿತ್ತು. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ತವರು ಮೈದಾನವೂ ಇದೇ ಆಗಿದೆ.
ಕಳೆದ ಐದು ಫೈನಲ್ ಗಳಲ್ಲಿ ಮೂರು ಇಲ್ಲೇ ನಡೆದಿದೆ!
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2022ರಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಬಳಿಕ 2023, 2025 ಹಾಗೂ 2026ರಲ್ಲೂ ಇದೇ ಮೈದಾನಕ್ಕೆ ಆತಿಥ್ಯ ಸಿಕ್ಕಿದೆ. 2024ರಲ್ಲಿ ಮಾತ್ರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು.
2022ರ ಫೈನಲ್ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡವು 7 ವಿಕೆಟ್ಗಳ ಜಯ ಸಾಧಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. 2023ರಲ್ಲಿ ಗುಜರಾತ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಜಯ ದಾಖಲಿಸಿತ್ತು. 2025ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ 6 ರನ್ಗಳ ಅಂತರದ ಗೆಲುವು ಸಾಧಿಸಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
ಇದರೊಂದಿಗೆ ಅತಿಹೆಚ್ಚು ಬಾರಿ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸಿದ ಮೈದಾನ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಕ್ರೀಡಾಂಗಣ ಪಾತ್ರವಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ 2011, 2012 ಹಾಗೂ 2024ರಲ್ಲಿ ಫೈನಲ್ ನಡೆದಿದ್ದರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ (2013, 2015), ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (2014, 2016), ಮುಂಬೈನ ಡಿ.ವೈ. ಪಾಟೀಲ್ ಮೈದಾನ (2008, 2010) ಹಾಗೂ ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣ (2017, 2019) ತಲಾ ಎರಡು ಬಾರಿ ಫೈನಲ್ಗೆ ಆತಿಥ್ಯ ವಹಿಸಿವೆ. 2018ರ ಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿತ್ತು.
ಮೋದಿ ಮೈದಾನಕ್ಕೇಕೆ ಆದ್ಯೆತ?
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣವು 1.32 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬಲ್ಲದು. ಇದು ಭಾರತದ ಇತರ ಪ್ರಮುಖ ಮೈದಾನಗಳಿಗಿಂತ ಹೆಚ್ಚಿನ ಆಸನ ಸಾಮರ್ಥ್ಯ ಹೊಂದಿದೆ.
ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ, ಹೈಟೆಕ್ ಎಲ್ಇಡಿ ಫ್ಲಡ್ಲೈಟ್ಗಳು, ಬೃಹತ್ ಜನಸಂದಣಿಯನ್ನು ನಿರ್ವಹಿಸಲು ಬೇಕಾದ ವ್ಯವಸ್ಥೆಗಳು ಹಾಗೂ ವಿಶ್ವದರ್ಜೆಯ ಮೂಲಸೌಕರ್ಯಗಳು ಈ ಮೈದಾನದ ವಿಶೇಷತೆಗಳಾಗಿವೆ. ಇದೇ ಕಾರಣಗಳಿಂದ ಬಿಸಿಸಿಐ ದೊಡ್ಡ ಪಂದ್ಯಗಳಿಗೆ ಈ ಮೈದಾನವನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದೆ ಎನ್ನಲಾಗಿದೆ.
ಐಪಿಎಲ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದ ಮಹತ್ವದ ಟೂರ್ನಿಗಳಿಗೂ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಿದೆ.
2023ರ ಏಕದಿನ ವಿಶ್ವಕಪ್ನಲ್ಲಿ ಐದು ಪಂದ್ಯಗಳು ಇಲ್ಲಿ ನಡೆದಿದ್ದವು. ಲೀಗ್ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತ್ತು. ಆದರೆ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಸೋಲು ಅನುಭವಿಸಿತ್ತು.
2026ರ ಟಿ20 ವಿಶ್ವಕಪ್ ನಲ್ಲೂ ಈ ಮೈದಾನದಲ್ಲಿ ಏಳು ಪಂದ್ಯಗಳು ನಡೆದಿದ್ದವು. ಲೀಗ್ ಹಂತದಲ್ಲಿ ಭಾರತವು ನೆದರ್ಲೆಂಡ್ ವಿರುದ್ಧ 17 ರನ್ಗಳ ಜಯ ಸಾಧಿಸಿತ್ತು. ಸೂಪರ್–8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳ ಸೋಲು ಕಂಡಿತ್ತು. ಬಳಿಕ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.
ಐಪಿಎಲ್ 2026ರ ಪ್ಲೇಆಫ್ ವೇಳಾಪಟ್ಟಿ
• ಮೇ 26: ಕ್ವಾಲಿಫೈಯರ್–1 — ಧರ್ಮಶಾಲಾ
• ಮೇ 27: ಎಲಿಮಿನೇಟರ್ — ನ್ಯೂ ಚಂಡೀಗಢ
• ಮೇ 29: ಕ್ವಾಲಿಫೈಯರ್–2 — ನ್ಯೂ ಚಂಡೀಗಢ
• ಮೇ 31: ಫೈನಲ್ — ಅಹಮದಾಬಾದ್ (ನರೇಂದ್ರ ಮೋದಿ ಕ್ರೀಡಾಂಗಣ)






