ಐಪಿಎಲ್ ಮೊದಲ ಕ್ವಾಲಿಫೈಯರ್ : ಕೊಹ್ಲಿ ಆರಂಭಿಕ ಜತೆಗಾರ ಬದಲು ?

Photo Credit : PTI
ಹೊಸದಿಲ್ಲಿ: ಪ್ರಸಕ್ತ ಐಪಿಎಲ್ನ ಮೊದಲ ಕ್ವಾಲಿಫೈಯರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ. ಆದರೆ, ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಅವರ ಲಭ್ಯತೆ ಬಗ್ಗೆ ಇನ್ನೂ ಕುತೂಹಲ ಮುಂದುವರಿದಿದೆ.
ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಫಿಲ್ ಸಾಲ್ಟ್ ಗಾಯದ ಕಾರಣದಿಂದಾಗಿ ಲೀಗ್ ಹಂತದ ಹಲವು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಅವರ ಸ್ಥಾನದಲ್ಲಿ ಅವಕಾಶ ಪಡೆದ ಜಾಕೋಬ್ ಬೆಥೆಲ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇತ್ತ ಎಸ್ಆರ್ಎಚ್ ವಿರುದ್ಧ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇವೆಲ್ಲದರ ನಡುವೆ ಫಿಲ್ ಸಾಲ್ಟ್ ಪಂದ್ಯದಲ್ಲಿ ಆಡುತ್ತಾರೆಯೇ, ಇಲ್ಲವೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಸಾಲ್ಟ್ ಆಡುವ ಬಗ್ಗೆ ಕೇಳಿದಾಗ ಆರ್ಸಿಬಿ ನಾಯಕ ರಜತ್ ಪಾಟಿದಾರ್ ನೇರ ಉತ್ತರ ನೀಡಲು ನಿರಾಕರಿಸಿದರು. ಬೆರಳಿನ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆದು ಸಾಲ್ಟ್ ಇತ್ತೀಚೆಗೆ ಇಂಗ್ಲೆಂಡ್ನಿಂದ ವಾಪಸ್ಸಾಗಿದ್ದಾರೆ. ಸಾಲ್ಟ್ ಫಿಟ್ ಆಗಿದ್ದು, ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಆಡುವ 11ರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಾಟಿದಾರ್ ಹೇಳಿದರು.
ಪ್ರಸಕ್ತ ಐಪಿಎಲ್ನ ಬಹುತೇಕ ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ಗಳು ಹರಿದು ಬರುತ್ತಿರುವುದರಿಂದ ಬೌಲರ್ ಗಳ ಮೇಲೆ ಹೆಚ್ಚಿನ ಸವಾಲು ಇದೆ ಎಂದು ಪಾಟಿದಾರ್ ಅವರು ಅಭಿಪ್ರಾಯಪಟ್ಟರು. ಈ ಬಾರಿ 220-250 ರನ್ಗಳು ಕೂಡಾ ಸುರಕ್ಷಿತ ಎಂಬ ಭಾವನೆ ಇಲ್ಲ. ಇದು ಬೌಲರ್ ಗಳ ಪಾಲಿಗೆ ಅದರಲ್ಲೂ ಮುಖ್ಯವಾಗಿ ವೇಗದ ಬೌಲರ್ ಗಳ ಪಾಲಿಗೆ ಆತಂಕದ ಅಂಶ ಎಂದು ಅವರು ವಿಶ್ಲೇಷಿಸಿದರು.
"ನನ್ನ ಪ್ರಕಾರ ಬೌಲರ್ ಗಳಿಗೆ ಸವಾಲು ಇದೆ. ವಿಕೆಟ್ಗಳು ಬ್ಯಾಟಿಂಗ್ಸ್ನೇಹಿ. ಬೌಂಡರಿಗಳು ಚಿಕ್ಕವು. ಇಬ್ಬನಿಯೂ ಇರುತ್ತದೆ. ವಿಶೇಷವಾಗಿ ವೇಗದ ಬೌಲರ್ಗಳು ಸಣ್ಣ ತಪ್ಪು ಮಾಡಿದರೂ ಚೆಂಡು ಸಿಕ್ಸರ್ ದಾಟಿರುತ್ತದೆ" ಎಂದು ಮಾಧ್ಯಮ ಸಂವಾದದಲ್ಲಿ ಅಭಿಪ್ರಾಯಪಟ್ಟರು. "ಆದಾಗ್ಯೂ ಯಾವುದೇ ಪರಿಸ್ಥಿತಿಯಲ್ಲೂ ಅತ್ಯುತ್ತಮ ಸಾಧನೆಗೆ ಪ್ರಯತ್ನಿಸುತ್ತೇವೆ. ವಿಕೆಟ್ಗಳು ಹೇಗಿರಬೇಕು ಎಂದು ನಿರ್ಧರಿಸುವುದು ನನ್ನ ಕೈಯಲ್ಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹ್ಮದಾಬಾದ್ಗೆ ಸ್ಥಳಾಂತರಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇದು ನನ್ನ ನಿಯಂತ್ರಣದಲ್ಲಿಲ್ಲ. ಫೈನಲ್ ಎಲ್ಲಿ ನಡೆಯಬೇಕೋ ಅಲ್ಲಿ ನಡೆಯುತ್ತದೆ. ನಮ್ಮ ಗಮನ ಫೈನಲ್ ತಲುಪುವತ್ತ ಇದೆ,” ಎಂದು ಸ್ಪಷ್ಟಪಡಿಸಿದರು.






