ಐಪಿಎಲ್ ಪ್ಲೇ ಆಫ್ | ನಾಲ್ಕು ಸ್ಥಾನಗಳಿಗಾಗಿ ಏಳು ತಂಡಗಳ ಪೈಪೋಟಿ

PC : X
ಹೊಸದಿಲ್ಲಿ: ಪ್ರಸಕ್ತ 2025ರ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯ ಲೀಗ್ ಹಂತದಲ್ಲಿ 15 ಪಂದ್ಯಗಳು ಆಡಲು ಬಾಕಿ ಉಳಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇ ಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಗುಳಿದಿವೆ.
ಪ್ಲೇ ಆಫ್ ಸುತ್ತಿಗೆ ತೇರ್ಗಡೆಯಾಗಲು 7 ತಂಡಗಳು ಸ್ಪರ್ಧಾಕಣದಲ್ಲಿವೆ. ಆದರೆ ಯಾವುದೇ ತಂಡವು ಇನ್ನೂ ಅಗ್ರ 4ರಲ್ಲಿ ಸ್ಥಾನ ಪಡೆದಿಲ್ಲ.
ಆರ್ಸಿಬಿ,ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ನಾಕೌಟ್ ಹಂತಕ್ಕೇರುವುದು ಖಚಿತವಾಗಿದ್ದು, ಮುಂಬೈ ಇಂಡಿಯನ್ಸ್ ಕೂಡ ಪ್ರಬಲ ಸ್ಪರ್ಧಿಯಾಗಿದೆ. ಡೆಲ್ಲಿ ತಂಡ ಕೂಡ ಸ್ಪರ್ಧೆಯಲ್ಲಿದೆ. ಲಕ್ನೊ ಹಾಗೂ ಕೆಕೆಆರ್ ಅಲ್ಪ ಅವಕಾಶ ಹೊಂದಿವೆ.
ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು 7 ತಂಡಗಳು ಏನು ಮಾಡುವ ಅಗತ್ಯವಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು
-ಆಡಿರುವ ಪಂದ್ಯ: 11, ಪಾಯಿಂಟ್ಸ್: 16, ರನ್ರೇಟ್: 0.482
-ಉಳಿದಿರುವ ಪಂದ್ಯಗಳು: ಲಕ್ನೊ, ಎಸ್ಆರ್ಎಚ್, ಕೆಕೆಆರ್
ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಮಳೆಗಾಹುತಿಯಾದ ಹಿನ್ನೆಲೆಯಲ್ಲಿ ಪ್ಲೇ ಆಫ್ನಲ್ಲಿ ಸ್ಥಾನ ಗಿಟ್ಟಿಸಲು ಆರ್ಸಿಬಿಗೆ ಕೇವಲ ಒಂದು ಪಂದ್ಯ ಗೆಲ್ಲುವ ಅಗತ್ಯವಿದೆ. ಉಳಿದಿರುವ 3 ಪಂದ್ಯಗಳನ್ನು ಜಯಿಸಿದರೆ, ಗುಜರಾತ್ ಒಂದು ಪಂದ್ಯ ಸೋತರೆ ಆರ್ಸಿಬಿ ಒಟ್ಟು 22 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಲಿದೆ.
ಪಂಜಾಬ್ ಕಿಂಗ್ಸ್
-ಆಡಿರುವ ಪಂದ್ಯಗಳು: 11, ಅಂಕ: 15, ರನ್ರೇಟ್: 0.376
-ಉಳಿದಿರುವ ಪಂದ್ಯಗಳು: ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್
ಪ್ಲೇ ಆಫ್ಗೆ ಅರ್ಹತೆ ಖಚಿತಪಡಿಸಲು ಪಂಜಾಬ್ ಕಿಂಗ್ಸ್ ಇನ್ನೆರಡು ಪಂದ್ಯಗಳನ್ನು ಜಯಿಸಿ 19 ಅಂಕ ಕಲೆ ಹಾಕಬೇಕಾಗಿದೆ.ಒಂದು ವೇಳೆ ಉಳಿದಿರುವ 3 ಪಂದ್ಯಗಳನ್ನು ಜಯಿಸಿದರೆ ಅಗ್ರ-2ರಲ್ಲಿ ಸ್ಥಾನ ಪಡೆಯಬಹುದು. ಪಂಜಾಬ್ ಉಳಿದಿರುವ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಅಗ್ರ-5 ತಂಡಗಳ ಎದುರು ಆಡಲಿದೆ. ಈ ಪಂದ್ಯದ ಫಲಿತಾಂಶವು ಪಂಜಾಬ್ಗೆ ಮುಖ್ಯವಾಗಿದೆ.
ಮುಂಬೈ ಇಂಡಿಯನ್ಸ್
-ಆಡಿರುವ ಪಂದ್ಯಗಳು: 11, ಅಂಕ: 14, ರನ್ರೇಟ್: 1.274
-ಉಳಿದಿರುವ ಪಂದ್ಯಗಳು: ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್
ಸತತ 6 ಪಂದ್ಯಗಳನ್ನು ಜಯಿಸಿರುವ ಮುಂಬೈ ತಂಡ ಸದ್ಯ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದೆ. ಸತತ 6 ಪಂದ್ಯಗಳ ಪೈಕಿ 4 ಪಂದ್ಯಗಳನ್ನು 50ಕ್ಕೂ ಅಧಿಕ ರನ್ ಅಥವಾ 25 ಎಸೆತಗಳು ಬಾಕಿ ಇರುವಾಗಲೇ ಗೆದ್ದಿದೆ. ಇದು ಅದರ ರನ್ರೇಟ್ 1.274ಕ್ಕೆ ತಲುಪಲು ನೆರವಾಗಿದೆ. ಇನ್ನು 2 ಪಂದ್ಯಗಳ ಗೆಲುವು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಲಿದೆ. 20 ಅಂಕ ಗಳಿಸಿದರೆ ಉತ್ತಮ ರನ್ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಬಹುದು.
ಗುಜರಾತ್ ಟೈಟಾನ್ಸ್
-ಆಡಿರುವ ಪಂದ್ಯಗಳು: 10, ಅಂಕ: 14, ರನ್ರೇಟ್: 0.867
-ಉಳಿದಿರುವ ಪಂದ್ಯಗಳು: ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೊ, ಸಿಎಸ್ಕೆ
ಗುಜರಾತ್ ಟೈಟಾನ್ಸ್ ತಂಡ ಕೂಡ ಅತ್ಯುತ್ತಮ ರನ್ರೇಟ್ ಹೊಂದಿದೆ. ಕೇವಲ 10 ಪಂದ್ಯಗಳನ್ನು ಆಡಿರುವ ಗುಜರಾತ್ಗೆ ಇನ್ನು 4 ಪಂದ್ಯಗಳು ಆಡಲು ಬಾಕಿ ಇದೆ. ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇ ಆಫ್ ಅರ್ಹತೆ ಖಚಿತವಾಗಲಿದೆ. ಆದರೆ ಉಳಿದ 4 ಪಂದ್ಯಗಳನ್ನು ಸೋತರೆ 14 ಅಂಕದೊಂದಿಗೆ ಟೂರ್ನಿಯಿಂದ ನಿರ್ಗಮಿಸಲಿದೆ. ಕೊನೆಯ 2 ಪಂದ್ಯಗಳನ್ನು ತವರು ನೆಲದಲ್ಲಿ ಆಡಲಿದ್ದು ಇದು ತಂಡಕ್ಕೆ ನೆರವಾಗಬಹುದು. ಈ ತನಕ ಅಹ್ಮದಾಬಾದ್ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದೆ.
ಒಂದೊಮ್ಮೆ ಎಲ್ಲ 4 ಪಂದ್ಯಗಳನ್ನು ಜಯಿಸಿದರೆ, ಆರ್ಸಿಬಿ ಒಂದು ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತರೆ 22 ಅಂಕ ಗಳಿಸಿ ಅಗ್ರ ಸ್ಥಾನ ಪಡೆಯಬಹುದು. ಉಳಿದ ಪಂದ್ಯಗಳನ್ನು ಸೋತರೆ 7ನೇ ಸ್ಥಾನಕ್ಕೆ ಕುಸಿಯಬಹುದು.
ಡೆಲ್ಲಿ ಕ್ಯಾಪಿಟಲ್ಸ್
-ಆಡಿರುವ ಪಂದ್ಯಗಳು: 11, ಪಾಯಿಂಟ್ಸ್: 13, ರನ್ರೇಟ್: 0.362
-ಉಳಿದಿರುವ ಪಂದ್ಯಗಳು: ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್
ಹೈದರಾಬಾದ್ ವಿರುದ್ಧ ಪಂದ್ಯವು ಮಳೆಗಾಹುತಿಯಾದ ಕಾರಣ ಡೆಲ್ಲಿ ತಂಡವು ಸತತ 2ನೇ ಪಂದ್ಯ ಸೋಲುವ ಭೀತಿಯಿಂದ ಪಾರಾಗಿ ನಿಟ್ಟಿಸಿರು ಬಿಟ್ಟಿದೆ. ಒಂದು ವೇಳೆ ಇತರ ತಂಡಗಳ ಫಲಿತಾಂಶ ಅದರ ಪರವಾಗಿದ್ದರೆ ಅಗ್ರ-4ರಲ್ಲಿ ಸ್ಥಾನ ಪಡೆಯಬಹುದು. ಉಳಿದ ಎಲ್ಲ 3 ಪಂದ್ಯಗಳನ್ನು ಜಯಿಸಿದರೆ ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಬಹುದು. ಆದರೆ ಹಿಂದಿನ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಜಯ ಸಾಧಿಸಿರುವ ಡೆಲ್ಲಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.
ಕೋಲ್ಕತಾ ನೈಟ್ ರೈಡರ್ಸ್
-ಆಡಿರುವ ಪಂದ್ಯಗಳು: 11, ಅಂಕ: 11, ರನ್ರೇಟ್: 0.249
ಉಳಿದಿರುವ ಪಂದ್ಯಗಳು: ಸಿಎಸ್ಕೆ, ಎಸ್ಆರ್ಎಚ್, ಆರ್ಸಿಬಿ
ಕೆಕೆಆರ್ ತಂಡವು 15 ಅಂಕ ಗಳಿಸಿದರೆ, ಮುಂದಿನ ಸುತ್ತಿಗೇರುವ ಅಲ್ಪ ಅವಕಾಶ ಪಡೆಯಬಹುದು. ಆದರೆ, ಪ್ಲೇ ಆಫ್ ಸ್ಪರ್ಧೆಯಲ್ಲಿರಲು 17 ಅಂಕ ಗಳಿಸುವ ಅಗತ್ಯವಿದೆ.
ಲಕ್ನೊ ಸೂಪರ್ ಜಯಂಟ್ಸ್
-ಆಡಿರುವ ಪಂದ್ಯಗಳು: 11, ಅಂಕ: 10, ರನ್ರೇಟ್: 0.469
ಉಳಿದಿರುವ ಪಂದ್ಯಗಳು: ಆರ್ಸಿಬಿ, ಗುಜರಾತ್ ಟೈಟಾನ್ಸ್, ಎಸ್ಆರ್ಎಚ್
ಡೆಲ್ಲಿ ತಂಡದಂತೆಯೇ ಲಕ್ನೊ ತಂಡ ಕೂಡ ಹಿಂದಿನ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದೆ. ಇದರಲ್ಲಿ ಸತತ 3 ಸೋಲು ಕೂಡ ಸೇರಿದೆ. ಉಳಿದಿರುವ 3 ಪಂದ್ಯಗಳನ್ನು ಜಯಿಸಿದರೆ 16 ಅಂಕ ಗಳಿಸಬಹುದು. ಇತರ ಫಾರ್ಮ್ನಲ್ಲಿರುವ ತಂಡಗಳು ಸೋಲುವುದನ್ನು ನಿರೀಕ್ಷಿಸಬೇಕಾಗುತ್ತದೆ. ಆದರೆ ಇನ್ನೊಂದು ಪಂದ್ಯ ಸೋತರೆ ಲಕ್ನೊ ತಂಡ ಟೂರ್ನಿಯಿಂದ ನಿರ್ಗಮಿಸಲಿದೆ. ಕಳಪೆ ರನ್ರೇಟ್(-0.469)ತಂಡಕ್ಕೆ ನೆರವಾಗಲಾರದು.







