IPL ಅಭ್ಯಾಸ ಪಂದ್ಯ: ಸ್ಫೋಟಕ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್

PC | ndtv
ಹೈದರಾಬಾದ್ : ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, 2026ರ ಐಪಿಎಲ್ ಸೀಸನ್ಗೆ ತಾವು ಸರ್ವರೀತಿಯಲ್ಲಿ ಸಜ್ಜಾಗಿದ್ದಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂದೇಶ ರವಾನಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಶನಿವಾರ ನಡೆಸಿದ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಆಟಗಾರ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿ ಎಸ್ಆರ್ ಎಚ್-ಎ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಇದರಿಂದಾಗಿ ತಂಡ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಹೆನ್ರಿಚ್ ಕ್ಲಾಸನ್ 31 ಎಸೆತಗಳಲ್ಲಿ 49 ರನ್ ಗಳಿಸಿದರೆ, 23 ವರ್ಷದ ಭಾರತೀಯ ಯುವ ಪ್ರತಿಭೆ ಸಲೀಲ್ ಅರೋರಾ ಕೇವಲ 16 ಎಸೆತಗಳಲ್ಲಿ 47 ರನ್ ಸಿಡಿಸಿದರು. ಅರೋರಾ ಅವರನ್ನು ಎಸ್ಆರ್ ಎಚ್ ತಂಡ ಮಿನಿ ಹರಾಜಿನಲ್ಲಿ 1.5 ಕೋಟಿ ರೂಪಾಯಿಗೆ ಖರೀದಿಸಿತ್ತು.
ವಿಶ್ವಕಪ್ ಫೈನಲ್ನಲ್ಲಿ 21 ಎಸೆತಗಳಲ್ಲಿ 52 ರನ್ ಸಿಡಿಸಿದ್ದ ಅಭಿಷೇಕ್ ಶರ್ಮಾ, ಇದೀಗ 42 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಆಟದ ಲಯ ಕಂಡುಕೊಂಡಿರುವ ಸಂದೇಶ ಸಾರಿದ್ದಾರೆ. ಕುತೂಹಲದ ವಿಷಯವೆಂದರೆ ಎಸ್ಆರ್ ಎಚ್-ಬಿ ತಂಡದ ಪರ ಕೂಡಾ ಇನಿಂಗ್ಸ್ ಆರಂಭಿಸಿದ ವಿಶ್ವದ ನಂಬರ್ ವನ್ ಆಟಗಾರ ನಾಲ್ಕು ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ, ಯುವ ವೇಗಿ ಪ್ರಫುಲ್ ಹಿಂಗೆಯವರಿಗೆ ವಿಕೆಟ್ ಒಪ್ಪಿಸಿದರು.
ಎಸ್ಆರ್ ಎಚ್ ಬಿ ತಂಡದ ಪರ ಇಶಾನ್ ಕಿಶನ್ ಕೇವಲ 25 ಎಸೆತಗಳಲ್ಲಿ 72 ರನ್ ಸಿಡಿಸಿದರು. ಪ್ಯಾಟ್ ಕಮಿನ್ಸ್ ಅವರು ಟೂರ್ನಿಯ ಮೊದಲ ಕೆಲ ಪಂದ್ಯಗಳನ್ನು ಕಳೆದುಕೊಳ್ಳುವುದರಿಂದ ನಾಯಕತ್ವದ ಹೊಣೆ ಕಿಶನ್ಗೆ ಇರುತ್ತದೆ.
WILDFIRE has a 🆕 name 🔥😍 pic.twitter.com/IUIKnHNUS5
— SunRisers Hyderabad (@SunRisers) March 21, 2026






