ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ RCB

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ RCB ಆಡಳಿತ ಸಮಿತಿ ತಲಾ 10 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ RCB ಆಡಳಿತ ಸಮಿತಿ, ಬುಧವಾರ ಸಂಭವಿಸಿದ ದುರದೃಷ್ಟಕರ ಘಟನೆ ತೀವ್ರ ದುಃಖ ಮತ್ತು ನೋವನ್ನುಂಟು ಮಾಡಿದೆ. ಘಟನೆಯಲ್ಲಿ ಮೃತಪಟ್ಟ ಹನ್ನೊಂದು ಮಂದಿಯ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ನೀಡುವುದಾಗಿ ಘೋಷಿಸಿದೆ.
: The unfortunate incident in Bengaluru yesterday has caused a lot of anguish and pain to the RCB family. As a mark of respect and a gesture of solidarity, RCB has announced a financial… pic.twitter.com/C50WID1FEI
— Royal Challengers Bengaluru (@RCBTweets) June 5, 2025
ಇದಲ್ಲದೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳ ನೆರವಿಗಾಗಿ ಆರ್.ಸಿ.ಬಿ. ಕೇರ್ಸ್ ಎಂಬ ನಿಧಿಯನ್ನು ಸಹ ರಚಿಸಲಾಗುವುದು ಎಂದು RCB ಆಡಳಿತ ಸಮಿತಿ ತಿಳಿಸಿದೆ.
ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಿಗದಿಯಾಗಿತ್ತು. ವಿಜೇತ ತಂಡಕ್ಕೆ ಶುಭಾಶಯ ಕೋರಲು, ಸಂಭ್ರಮ ಆಚರಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಜನರು ಬಂದಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ.







