IPL | CSK ಮುಖ್ಯ ಕೋಚ್ ಆಗಿ ಝಹೀರ್ ಖಾನ್ ನೇಮಕ
2027ರ ಆವೃತ್ತಿಗೂ ಮುನ್ನ ಜವಾಬ್ದಾರಿ ವಹಿಸಲಿರುವ ಮಾಜಿ ವೇಗಿ

ಝಹೀರ್ ಖಾನ್
ಚೆನ್ನೈ: ಭಾರತದ ಮಾಜಿ ವೇಗಿ ಝಹೀರ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ CSK ತಂಡವನ್ನು ಮತ್ತೆ ಯಶಸ್ಸಿನ ಹಾದಿಗೆ ಕೊಂಡೊಯ್ಯುವ ಜವಾಬ್ದಾರಿ ಝಹೀರ್ ಅವರ ಮೇಲಿದೆ. 2027ರ IPLಗೂ ಮುನ್ನ ಅವರು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಝಹೀರ್ ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ವರ್ಷಗಳ ಕಾಲ ‘ಕ್ರಿಕೆಟ್ ನಿರ್ದೇಶಕ’ರಾಗಿ ಕೆಲಸ ಮಾಡಿದ್ದರು. 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಅವರ ಆಟದ ಅನುಭವ ಹಾಗೂ ಯುವ ಆಟಗಾರರನ್ನು ಬೆಳೆಸುವ ಸಾಮರ್ಥ್ಯವನ್ನು ಪರಿಗಣಿಸಿ CSK ಅವರನ್ನು ಆಯ್ಕೆ ಮಾಡಿದೆ.
‘ಝಹೀರ್ ಅವರ ವಿಶಿಷ್ಟ ಆಟದ ವೃತ್ತಿಜೀವನ ಮತ್ತು ಯುವ ಪ್ರತಿಭೆಗಳನ್ನು ಬೆಳೆಸುವ ಸಾಬೀತಾದ ಸಾಮರ್ಥ್ಯವು ಅವರನ್ನು ನಮ್ಮ ತಂಡಕ್ಕೆ ಅಮೂಲ್ಯ ಸೇರ್ಪಡೆಯನ್ನಾಗಿಸಿದೆ. ಅವರ ಮಾರ್ಗದರ್ಶನದಿಂದ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವಿದೆ’ ಎಂದು CSK ಯ ರೂಪಾ ಗುರುನಾಥ್ ಹೇಳಿದ್ದಾರೆ.
‘2000ರ ದಶಕದಲ್ಲಿ ಭಾರತ ತಂಡದ ಯಶಸ್ಸಿಗೆ ಝಹೀರ್ ಪ್ರಮುಖ ಕಾರಣಕರ್ತರಲ್ಲೊಬ್ಬರಾಗಿದ್ದರು. ಅವರು ಅತ್ಯುತ್ತಮ ಕ್ರಿಕೆಟ್ ತಜ್ಞರಲ್ಲಿ ಒಬ್ಬರು. ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇವೆ’ ಎಂದು CSK ವ್ಯವಸ್ಥಾಪಕ ನಿರ್ದೇಶಕ (MD) ಕೆ.ಎಸ್. ವಿಶ್ವನಾಥನ್ ಹೇಳಿದ್ದಾರೆ.
CSK ಸತತ ಮೂರು ವರ್ಷ ಪ್ಲೇ-ಆಫ್ಗೆ ಪ್ರವೇಶಿಸಲು ವಿಫಲವಾದ ನಂತರ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಹಲವು ತಿಂಗಳು ಚರ್ಚೆ ನಡೆದಿತ್ತು.
17 ವರ್ಷಗಳಿಗೂ ಹೆಚ್ಚು ಕಾಲ CSK ತಂಡದೊಂದಿಗೆ ಕೆಲಸ ಮಾಡಿದ್ದ ಸ್ಟೀಫನ್ ಫ್ಲೆಮಿಂಗ್ ಬಳಿಕ ತಂಡವನ್ನು ತೊರೆದಿದ್ದರು. ಹೊಸ ಕೋಚ್ ಹುದ್ದೆಗೆ ಇಂಗ್ಲೆಂಡ್ನ ಮಾಜಿ ನಾಯಕ ಇಯಾನ್ ಮಾರ್ಗನ್ ಮತ್ತು ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿದ್ದವು.
ಹೇಮಂಗ್ ಬದಾನಿ ಅವರ ಹೆಸರು ಹಲವು ವಾರಗಳ ಕಾಲ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಝಹೀರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ. CSK ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಹೊಸ ಕೋಚ್ ಆಗಿ ಭಾರತೀಯರೊಬ್ಬರನ್ನು ನೇಮಿಸಲು ಒಲವು ಹೊಂದಿದ್ದರು ಎಂದು ವರದಿಗಳು ತಿಳಿಸಿದ್ದವು.
ಝಹೀರ್ ನೇಮಕವಾಗಿರುವ ಹಿನ್ನೆಲೆಯಲ್ಲಿ ಎಂ.ಎಸ್. ಧೋನಿ ಅವರ ಮುಂದಿನ ಪಾತ್ರದ ಬಗ್ಗೆ ಕುತೂಹಲ ಮೂಡಿದೆ. ಧೋನಿ ಆಟಗಾರನಾಗಿ CSK ತಂಡದಲ್ಲಿ ಮುಂದುವರಿಯುತ್ತಾರೆಯೇ ಅಥವಾ ಆಡಳಿತಾತ್ಮಕ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
2026ರಲ್ಲಿ ಧೋನಿ CSK ಪರ ಒಂದೂ ಪಂದ್ಯ ಆಡಿರಲಿಲ್ಲ.
ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಝಹೀರ್ ಖಾನ್ ಉತ್ಸುಕರಾಗಿದ್ದಾರೆ.
‘ನಾನು ಕ್ರಿಕೆಟಿಗನಾಗಿದ್ದಾಗ ಮೈದಾನದಲ್ಲಿ CSK ತಂಡವನ್ನು ಎದುರಿಸಿದ್ದೆ. ಆ ಪಂದ್ಯಗಳ ಪೈಪೋಟಿಯನ್ನು ಸಂಪೂರ್ಣವಾಗಿ ಆನಂದಿಸಿದ್ದೆ. ಚೆಪಾಕ್ ನಲ್ಲಿ CSK ಅಭಿಮಾನಿಗಳು ಸೃಷ್ಟಿಸುವ ವಾತಾವರಣವು ಈ ಅನುಭವವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ.
ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಪ್ರತಿಷ್ಠಿತ ತಂಡದ ಭಾಗವಾಗಲು ನಾನು ಕಾತರನಾಗಿದ್ದೇನೆ’ ಎಂದು ಝಹೀರ್ ಹೇಳಿದ್ದಾರೆ.






