ಶ್ರೀಲಂಕಾ ವಿರುದ್ಧ ಸರಣಿಗೆ ಆಕಿಬ್ ನಬಿಗೆ ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿದ ಇರ್ಫಾನ್ ಪಠಾಣ್

ಇರ್ಫಾನ್ ಪಠಾಣ್ , ಆಕಿಬ್ ನಬಿ | Photo Credit : PTI
ಹೊಸದಿಲ್ಲಿ, ಜು.29: ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ಪ್ರಕಟಿಸಲಾಗಿರುವ ಭಾರತ ಟೆಸ್ಟ್ ತಂಡದಿಂದ ಆಕಿಬ್ ನಬಿ ಅವರನ್ನು ಹೊರಗಿಟ್ಟಿದ್ದನ್ನು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಪ್ರಶ್ನಿಸಿದರು.
ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಯಲ್ಲಿ ಒಟ್ಟು 60 ವಿಕೆಟ್ಗಳನ್ನು ಉರುಳಿಸಿದ್ದ ನಬಿ ಅವರು ಜಮ್ಮು-ಕಾಶ್ಮೀರ ತಂಡವು ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಪ್ರದರ್ಶನದಿಂದ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಸೇರಿದ್ದ ನಬಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದರು. ಎರಡು ಚತುರ್ದಿನ ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಪಡೆದಿದ್ದರು.
ನಬಿ ದೇಶೀಯ ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಮಾರ್ಗದರ್ಶನ ನೀಡಿದ್ದ ಪಠಾಣ್, ಆಯ್ಕೆಗಾರರ ನಿರ್ಧಾರವು ನನಗೆ ಅಚ್ಚರಿ ತಂದಿದೆ ಎಂದರು.
‘‘ನಬಿ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದೇ ಇರುವ ಹಿಂದಿನ ತರ್ಕಕ್ಕೆ ನನ್ನಲ್ಲಿ ಯಾವುದೇ ಉತ್ತರವಿಲ್ಲ.ಆಯ್ಕೆಯ ಪ್ರಕ್ರಿಯೆಯು ನನಗೆ ಅರ್ಥವಾಗುತ್ತಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಮುಹಮ್ಮದ್ ಸಿರಾಜ್ ನಂ.1 ಬೌಲರ್ ಆಗಿದ್ದಾರೆ. ದೇಶೀಯ ಕ್ರಿಕೆಟ್ ಪ್ರದರ್ಶನವು ಮುಖ್ಯವಾದರೆ ಆಕಿಬ್ ನಬಿಗೆ ಅವಕಾಶ ನೀಡಲಿಲ್ಲವೇಕೆ? ನಬಿ ಅವರಿಗೆ ಆಡುವ ಅವಕಾಶ ನೀಡಿ ಅವರನ್ನು ಪರೀಕ್ಷಿಸುವ ಅಗತ್ಯವಿತ್ತು’’ ಎಂದು ಪಠಾಣ್ ಹೇಳಿದ್ದಾರೆ.






