ಭಾರತ ಮತ್ತು ಇಂಗ್ಲೆಂಡ್ ಐದನೇ ಟೆಸ್ಟ್ | ದ ಓವಲ್ ಬ್ಯಾಟರ್ ಗಳ ಸ್ವರ್ಗವೇ?

PC : X
ಹೊಸದಿಲ್ಲಿ, ಜು. 29: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಓವಲ್ ನಲ್ಲಿ ಗುರುವಾರ ಆರಂಭಗೊಳ್ಳಲಿದೆ. ಈಗ ಎಲ್ಲರ ಚಿತ್ತ ಟಾಸ್ ಮೇಲೆ ನೆಟ್ಟಿದೆ. ಈ ಮೈದಾನದ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಟಾಸ್ ಗೆ ಎಲ್ಲಿಲ್ಲದ ಮಹತ್ವ ಬಂದಿದೆ.
ದ ಓವಲ್ ನಲ್ಲಿ ಆಡಲಾಗಿರುವ ಕೊನೆಯ ಪ್ರಥಮ ದರ್ಜೆ ಪಂದ್ಯವೆಂದರೆ ಜೂನ್ನಲ್ಲಿ ಸರ್ರೆ ಮತ್ತು ಡರ್ಹಮ್ ನಡುವೆ ನಡೆದ ಕೌಂಟಿ ಚಾಂಪಿಯನ್ ಶಿಪ್ ಡಿವಿಶನ್ ವನ್ ಪಂದ್ಯ. ಆ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳು ದಾಖಲಾಗಿದ್ದವು.
ಟಾಸ್ ಗೆದ್ದ ಡರ್ಹಮ್ ತಂಡವು ರೋರಿ ಬರ್ನ್ಸ್ ನಾಯಕತ್ವದ ಸರ್ರೆಯನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಸರ್ರೆ ತನ್ನ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ಗಳ ನಷ್ಟಕ್ಕೆ 820 ರನ್ ಗಳ ಅಗಾಧ ಮೊತ್ತವನ್ನು ಕಲೆಹಾಕಿ ಡಿಕ್ಲೇರ್ ಮಾಡಿತು. ಆರಂಭಿಕ ಆಟಗಾರ ಡಾಮ್ ಸಿಬ್ಲಿ 475 ಎಸೆತಗಳಲ್ಲಿ 305 ರನ್ ಗಳನ್ನು ಪೇರಿಸಿದರು. ಸ್ಯಾಮ್ ಕರನ್ (108), ಡ್ಯಾನ್ ಲಾರೆನ್ಸ್ (178) ಮತ್ತು ವಿಲ್ ಜಾಕ್ಸ್ (119) ಶತಕಗಳನ್ನು ಸಿಡಿಸಿದರು.
ಇದಕ್ಕೆ ಉತ್ತರವಾಗಿ, ಡರ್ಹಮ್ ತನ್ನ ಮೊದಲ ಇನಿಂಗ್ಸ್ ನಲ್ಲಿ 362 ರನ್ ಗೆ ಆಲೌಟಾಯಿತು. ಫಾಲೋಆನ್ ಪಡೆದ ಅದು ತನ್ನ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 262 ರನ್ ಗಳಿಸಿತು.
ಪಂದ್ಯದಲ್ಲಿ ಒಟ್ಟು 1,444 ರನ್ ಗಳು ದಾಖಲಾದವು ಮತ್ತು ಡ್ರಾದಲ್ಲಿ ಮುಕ್ತಾಯಗೊಂಡಿತು.
ಇದನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ಟೆಸ್ಟ್ನಲ್ಲಿ, ಟಾಸ್ ಗೆದ್ದರೆ ಭಾರತ ಅಥವಾ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಐದನೇ ಟೆಸ್ಟ್ ನಲ್ಲಿ ರನ್ ಗಳ ಸುರಿಮಳೆಯಾಗಬಹುದೇ?
ಭಾರತವು ಸರಣಿಯಲ್ಲಿ ಈಗ 1-2ರಿಂದ ಹಿಂದಿದೆ. ಆದರೆ, ಅದಕ್ಕೆ ಸರಣಿಯನ್ನು ಸಮಬಲಗೊಳಿಸುವ ಅವಕಾಶವಿದೆ.







