ಔಟಾಗಿದ್ದ ಇಶ್ ಸೋಧಿಯನ್ನು ಮತ್ತೆ ಬ್ಯಾಟಿಂಗ್ಗೆ ಕರೆದ ಬಾಂಗ್ಲಾ, ಹೃದಯ ಗೆದ್ದ ಕ್ರೀಡಾ ಸ್ಪೂರ್ತಿ

HASAN MAHMUD | Photo: X \ @saifahmed75
ಢಾಕಾ : ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಜನರ ಮನಗೆದ್ದಿದೆ. ಬೌಲಿಂಗ್ ಮಾಡುವುದಕ್ಕೂ ಮುನ್ನ ನಾನ್ಸ್ಟ್ರೈಕರ್ ಭಾಗದಲ್ಲಿ ಕ್ರೀಸ್ ಬಿಡುವ ಬ್ಯಾಟರ್ಗಳನ್ನು ರನ್ ಔಟ್ ಮಾಡುವುದು ಕ್ರಿಕೆಟ್ ಜಗತ್ತಿನಲ್ಲಿ ಈ ಹಿಂದಿನಿಂದಲೂ ವಿವಾದಕ್ಕೆ ನಾಂದಿ ಹಾಡುತ್ತಿದೆ.
ಕೆಲವರು ಈ ವಿಧಾನವನ್ನು ಟೀಕಿಸಿದರೆ, ಕೆಲವರು ಈ ರನೌಟ್ಗೆ ಬೆಂಬಲ ಸೂಚಿಸಿದ್ದಾರೆ. ವರ್ಷಗಳಿಂದ ವಿವಾದಕ್ಕೆ ಕಾರಣವಾಗುತ್ತಿರುವ ನಾನ್ ಸ್ಟ್ರೈಕರ್ ರನ್ಔಟ್ ಅನ್ನು ಕಳೆದ ವರ್ಷ ಅಧಿಕೃತವಾಗಿ MCC ಕಾನೂನಿನಲ್ಲಿ ಸೇರಿಸಲಾಗಿದೆ.
ಶನಿವಾರ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಬಾಂಗ್ಲಾದೇಶದ ಬೌಲರ್ ಹಸನ್ ಮಹಮೂದ್, ನ್ಯೂಜಿಲೆಂಡ್ನ ಇಶ್ ಸೋಧಿ ಅವರನ್ನು ಇದೇ ರೀತಿಯಲ್ಲಿ ಔಟ್ ಮಾಡಿದ್ದಾರೆ. ಆದರೆ ಆ ಬಳಿಕ ನಡೆದಿದ್ದೇ ಬೇರೆ.
ಕಿವೀಸ್ ಇನ್ನಿಂಗ್ಸ್ನ 46ನೇ ಓವರ್ನಲ್ಲಿ ಈ ಸನ್ನಿವೇಶಕ್ಕೆ ವೇದಿಕೆಯಾಯಿತು. ಚೆಂಡು ಎಸೆಯುವ ಮುನ್ನವೇ ಸೋಧಿ ನಾನ್ಸ್ಟ್ರೈಕ್ ಬಿಟ್ಟಿದ್ದನ್ನು ಗಮನಿಸಿದ ಹಸನ್, ಬೌಲಿಂಗ್ ಮಾಡುವುದರ ಬದಲಿಗೆ ಸ್ಟಂಪ್ಸ್ಗೆ ಚೆಂಡು ಮುಟ್ಟಿಸಿ ಬೇಲ್ಸ್ ಹಾರಿಸಿದರು. ಈ ವೇಳೆ ಅಂಪೈರ್ ಮಾರೈಸ್ ಎರಾಸ್ಮಸ್, ಮೂರನೇ ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರು. ಬ್ಯಾಟರ್ ಸೋಧಿ ಕ್ರೀಸ್ನಿಂದ ಹೊರಗಿದ್ದ ಕಾರಣ, ಖಚಿತವಾಗಿ ಸೋಧಿ ಅವರನ್ನು ಔಟ್ ಎಂದು ಘೋಷಿಸಿದರು.
ಔಟ್ ಘೋಷಿಸಿದ ಹಿನ್ನೆಲೆಯಲ್ಲಿ, ಬ್ಯಾಟರ್ ಸೋಧಿ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಅಂಪೈಯರ್ ಜೊತೆಗೆ ಮಾತನಾಡಿದ ಹಸನ್ ಮಹಮೂದ್ ಮತ್ತು ಬಾಂಗ್ಲಾದೇಶದ ನಾಯಕ ಲಿಟ್ಟನ್ ದಾಸ್, ಕಿವೀಸ್ ಬ್ಯಾಟರ್ ಅನ್ನು ಹಿಂದಕ್ಕೆ ಕರೆಸಿದರು. ಈ ವೇಳೆ ಮತ್ತೆ ಬ್ಯಾಟಿಂಗ್ಗೆ ಸೋಧಿ ಬಂದರು. ಈ ನಡುವೆ ಸೋಧಿ ಬೌಲರ್ ಹಸನ್ ಬಳಿ ಬಂದು ತಬ್ಬಿಕೊಂಡರು. ಈ ಸನ್ನಿವೇಶವು ನೆಟ್ಟಿಗರ ಮನಗೆದ್ದಿದೆ. ಹೀಗಾಗಿ ಬಾಂಗ್ಲಾ ಆಟಗಾರರ ಕ್ರೀಡಾಸ್ಫೂರ್ತಿಯನ್ನು ಜನರು ಮೆಚ್ಚಿಕೊಂಡಿದ್ದಾರೆ.
ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 86 ರನ್ ಗಳ ಜಯ ಗಳಿಸಿತು.
WOW HASAN MAHMUD WOW!!
— Saif Ahmed (@saifahmed75) September 23, 2023
Hasan becomes the first player from Bangladesh to run-out a batter in this fashion. #BANvNZ pic.twitter.com/5IE5sXq5Lb