ಕೌಂಟಿ ಕ್ರಿಕೆಟ್ ನ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಇಶಾನ್ ಕಿಶನ್

ಇಶಾನ್ ಕಿಶನ್ | PC ; @ImTanujSingh
ಲಂಡನ್: ಭಾರತದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ನಾಟಿಂಗ್ ಹ್ಯಾಮ್ನಲ್ಲಿ ಯಾರ್ಕ್ಶೈರ್ ವಿರುದ್ಧ ರವಿವಾರ ನಡೆದ ಡಿವಿಜನ್-1 ಪಂದ್ಯದಲ್ಲಿ ನಾಟಿಂಗ್ ಹ್ಯಾಮ್ಶೈರ್ ಪರ ಆಡುವ ಮೂಲಕ ಕೌಂಟಿ ಕ್ರಿಕೆಟ್ ಚಾಂಪಿಯನ್ಶಿಪ್ ನಲ್ಲಿ ಪಾದಾರ್ಪಣೆಗೈದಿದ್ದಾರೆ.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಕಿಶನ್ 33 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಔಟಾಗದೆ 44 ರನ್ ಗಳಿಸಿದರು. ನಾಟಿಂಗ್ ಹ್ಯಾಮ್ ದಿನದಾಟದಂತ್ಯಕ್ಕೆ 6 ವಿಕೆಟ್ಗಳ ನಷ್ಟಕ್ಕೆ 298 ರನ್ ಗಳಿಸಲು ನೆರವಾದರು.
26ರ ಹರೆಯದ ಬಿಹಾರದ ಬ್ಯಾಟರ್ ನಾಟಿಂಗ್ ಹ್ಯಾಮ್ ಶೈರ್ ಜೊತೆ ಎರಡು ಪಂದ್ಯಗಳನ್ನು ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಝಿಂಬಾಬ್ವೆ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಸೇರಿಕೊಂಡಿರುವ ಕೈಲ್ ವೆರ್ರೆನ್ನೆ ಬದಲಿಗೆ ಕಿಶನ್ ಆಯ್ಕೆಯಾಗಿದ್ದರು.
ಕೌಂಟಿ ಕ್ರಿಕೆಟಿಗೆ ಕಾಲಿಟ್ಟಿರುವ ಭಾರತದ ಮತ್ತೋರ್ವ ಆಟಗಾರ ತಿಲಕ್ ವರ್ಮಾ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿದ್ದರು.
2021ರ ನಂತರ ಮೊದಲ ಬಾರಿ ಕೆಂಪು ಚೆಂಡಿನ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಸಸೆಕ್ಸ್ ಪರವಾಗಿ ಡುಹ್ರಾಮ್ ವಿರುದ್ಧ 34 ಎಸೆತಗಳಲ್ಲಿ 31 ರನ್ ಗಳಿಸಿದ್ದರು.
ಆರ್ಚರ್ ಜುಲೈ 2ರಿಂದ ಭಾರತ ತಂಡದ ವಿರುದ್ಧ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.







