ಕೊನೆಗೂ ಮೌನ ಮುರಿದ ಇಶಾನ್ ಕಿಶನ್

ಇಶಾನ್ ಕಿಶನ್ | Photo Credit : PTI
ಹೊಸ ದಿಲ್ಲಿ: ಶಿಸ್ತು ಕ್ರಮದ ಭಾಗವಾಗಿ 2023ರಲ್ಲಿ ಅಂದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ರಿಂದ ತಂಡದಿಂದ ಹೊರದೂಡಲ್ಪಟ್ಟಿದ್ದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್, ದೇಶೀಯ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ತಮ್ಮ ಬ್ಯಾಟ್ ನಿಂದಲೇ ಟೀಕಾಕಾರರಿಗೆ ಉತ್ತರಿಸಿದ್ದಾರೆ. ಈ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ಒಟ್ಟು 517 ರನ್ ಕಲೆ ಹಾಕಿರುವ ಇಶಾನ್ ಕಿಶನ್, ಗುರುವಾರ ಹರ್ಯಾಣ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕೇವಲ 49 ರನ್ ಗಳಲ್ಲಿ 101 ರನ್ ಗಳಿಸುವ ಮೂಲಕ, ತಮ್ಮ ನಾಯಕತ್ವದ ಜಾರ್ಖಂಡ್ ತಂಡ ಚೊಚ್ಚಲ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಬಳಿಕ ತಮ್ಮ ಮೌನ ಮುರಿದಿರುವ ಇಶಾನ್ ಕಿಶನ್, “ನಾನು ಭಾರತ ತಂಡಕ್ಕೆ ಆಯ್ಕೆಯಾಗದಿದ್ದಾಗ ಕೊಂಚ ಬೇಸರವಾಗಿತ್ತು. ಯಾಕೆಂದರೆ, ಆಗ ನಾನು ಉತ್ತಮ ಲಯದಲ್ಲಿದ್ದೆ. ಆದರೆ, ಇಂತಹ ಪ್ರದರ್ಶನದ ಹೊರತಾಗಿಯೂ ನಾನು ಆಯ್ಕೆಯಾಗಿಲ್ಲವೆಂದರೆ, ನಾನು ಮತ್ತಷ್ಟು ಉತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೆ. ನಾನು ನನ್ನ ತಂಡ ಗೆಲುವು ಸಾಧಿಸುವಂತೆ ಮಾಡಬೇಕಿತ್ತು. ನಾವು ಒಂದು ತಂಡವಾಗಿ ಉತ್ತಮ ಪ್ರದರ್ಶನ ತೋರಬೇಕಿತ್ತು” ಎಂದು ಹೇಳಿದ್ದಾರೆ ಎಂದು Sportsstar ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನಿಮ್ಮ ಹತಾಶೆಯು ನಿಮ್ಮನ್ನು ಆವರಿಸದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಹತಾಶೆಯು ನಿಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ಸರಿಸುತ್ತದೆ ಎಂಬುದು ನಾನು ಎಲ್ಲ ಯುವ ಆಟಗಾರರಿಗೆ ನೀಡಲು ಬಯಸುವ ಸಂದೇಶವಾಗಿದೆ. ಆದರೆ, ಇದೇ ವೇಳೆ ನೀವು ಕಠಿಣ ಪರಿಶ್ರಮ ಪಡಬೇಕು. ನಿಮಗೆ ನಿಮ್ಮ ಬಗ್ಗೆ ನಂಬಿಕೆ ಇರಬೇಕು ಹಾಗೂ ನೀವು ಏನು ಸಾಧಿಸಬೇಕೊ ಅದರ ಕಡೆ ಗಮನ ಹರಿಸಬೇಕು” ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದರ ಹೊರತಾಗಿಯೂ, ಇಶಾನ್ ಕಿಶನ್ ಅವರಿಗೆ ಮುಂಬರುವ ಟಿ-20 ವಿಶ್ವ ಕಪ್ ಗೆ ಭಾರತ ತಂಡದಿಂದ ಕರೆ ಬರುವ ಸಾಧ್ಯಶತೆ ತೀರಾ ಕಡಿಮೆ ಎನ್ನಲಾಗಿದೆ.







