ಟಿ-20 ವಿಶ್ವಕಪ್| ಇಶಾನ್ ಕಿಶನ್ಗೆ ತೆರೆದ ಅವಕಾಶದ ಬಾಗಿಲು

ಇಶಾನ್ ಕಿಶನ್ | PC : PTI
ಹೊಸದಿಲ್ಲಿ, ಫೆ.3: ಮುಖ್ಯಕೋಚ್ ಗೌತಮ್ ಗಂಭೀರ್ ನೇತೃತ್ವದ ನೂತನ ಆಡಳಿತ ಮಂಡಳಿಯು ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಸ್ವಲ್ಪ ಪರಿವರ್ತನೆ ಮಾಡಿದ್ದರೂ ಟಿ-20 ಕ್ರಿಕೆಟ್ ತಂಡದಲ್ಲಿ ಹೆಚ್ಚು ಬದಲಾವಣೆಗೆ ಮುಂದಾಗಿಲ್ಲ. 2024ರ ಜೂನ್ನಲ್ಲಿ ಬ್ರಿಡ್ಜ್ಟೌನ್ನಲ್ಲಿ ಭಾರತವು ಟಿ-20 ವಿಶ್ವಕಪ್ ಎತ್ತಿ ಹಿಡಿದ ನಂತರ ಉತ್ತಮ ದಾಖಲೆ ಕಾಯ್ದುಕೊಂಡಿದೆ. ಶ್ರೀಲಂಕಾದ ಜೊತೆ 2026ರ ಟಿ-20 ವಿಶ್ವಕಪ್ ಆತಿಥ್ಯವಹಿಸಿರುವ ಭಾರತ ತಂಡವು ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.
ಸಂಜು ಸ್ಯಾಮ್ಸನ್ ಅವರ ಫಾರ್ಮ್ ಭಾರತದ ಟಿ-20 ತಂಡದ ಆಯ್ಕೆಯಲ್ಲಿ ಗೊಂದಲ ಉಂಟು ಮಾಡಿದ್ದು, ಭಾರತದ ಆಡುವ 11ರ ಬಳಗದಲ್ಲಿ ಸ್ಯಾಮ್ಸನ್ ಸ್ಥಾನ ಅಲುಗಾಡುತ್ತಿದೆ.
ಭಾರತ ತಂಡವು ಮೇಲ್ನೋಟಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿ ಕಂಡುಬರುತ್ತಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ ಭಾರತ ತಂಡವು ಆಡಿರುವ 41 ಟಿ-20 ಪಂದ್ಯಗಳ ಪೈಕಿ 33ರಲ್ಲಿ ಜಯ ಸಾಧಿಸಿದ್ದು, ಕೇವಲ ಆರರಲ್ಲಿ ಸೋತಿದೆ. ಇತ್ತೀಚೆಗೆ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ದ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.
ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜ ಟಿ-20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ.
2025ರ ಡಿ.20ರದು ವಿಶ್ವಕಪ್ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಷೇಕ್ ಶರ್ಮಾ ಅಗ್ರ ಸರದಿಯಲ್ಲಿದ್ದು, ತಿಲಕ್ ವರ್ಮಾ, ಶಿವಂ ದುಬೆ ಹಾಗೂ ರಿಂಕು ಸಿಂಗ್ ಮಧ್ಯಮ ಸರದಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಆಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಜಸ್ಪ್ರಿತ್ ಬುಮ್ರಾ ಹಾಗೂ ಅರ್ಷದೀಪ ಸಿಂಗ್ ಬೌಲಿಂಗ್ ದಾಳಿಯ ನೇತೃತ್ವ ವಹಿಸಲಿದ್ದಾರೆ. ಶುಭಮನ್ ಗಿಲ್ರನ್ನು ಕೈಬಿಡುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸ್ಯಾಮ್ಸನ್ಸ್ಗೆ ಅಭಿಷೇಕ್ರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಲಾಗಿತ್ತು.
ಸ್ಯಾಮ್ಸನ್ 2024ರ ಅಕ್ಟೋಬರ್ನಿಂದ 2025ರ ಫೆಬ್ರವರಿಯ ತನಕ 12 ಇನ್ನಿಂಗ್ಸ್ಗಳಲ್ಲಿ 37.91ರ ಸರಾಸರಿಯಲ್ಲಿ ಒಟ್ಟು 417 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕಗಳಿವೆ. ಆ ಮೂರೂ ಶತಕಗಳನ್ನು 190ರ ಸ್ಟ್ರೈಕ್ರೇಟ್ನಲ್ಲಿ ದಾಖಲಿಸಿದ್ದರು.
2025ರ ಸೆಪ್ಟಂಬರ್ನಲ್ಲಿ ಏಶ್ಯ ಕಪ್ ವೇಳೆ ಸ್ಯಾಮ್ಸನ್ ಅವರು ಆರಂಭಿಕನ ಸ್ಥಾನ ಕಳೆದುಕೊಂಡರು. 3ನೇ ಹಾಗೂ 5ನೇ ಕ್ರಮಾಂಕಕಕ್ಕೆ ತಳ್ಳಲ್ಪಟ್ಟರು. ವಿಶ್ವಕಪ್ ತಂಡವನ್ನು ಪ್ರಕಟಿಸುವ ಸಲುವಾಗಿ ಅಗ್ರ ಸ್ಥಾನಕ್ಕೆ ಮರಳುವ ಮೊದಲು ಐದು ಇನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 22 ಎಸೆತಗಳಲ್ಲಿ 37 ರನ್ ಗಳಿಸಿ ಮೊದಲಿನ ಫಾಮ್ಗೆ ಮರಳುವ ಸುಳಿವು ನೀಡಿದ್ದರು. ಗಿಲ್ರನ್ನು ಕೈಬಿಟ್ಟು ಸ್ಯಾಮ್ಸನ್ ಕೈಹಿಡಿದ ಟೀಮ್ ಮ್ಯಾನೇಜ್ಮೆಂಟ್ ಅಭಿಷೇಕ್ ಜೊತೆ ಇನಿಂಗ್ಸ್ ಆರಂಭಿಸುವ ಹೆಚ್ಚುವರಿ ಜವಾಬ್ದಾರಿಯನ್ನು ಸ್ಯಾಮ್ಸನ್ಗೆ ವಹಿಸಿತು.
ಸ್ವದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕಿವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಭಾರತದ ಟಿ-20 ಬತ್ತಳಿಕೆಯಲ್ಲಿ ದೊಡ್ಡ ಬಿರುಕು ಕಂಡುಬಂದಿದೆ. ಸ್ಯಾಮ್ಸನ್ ಐದು ಇನಿಂಗ್ಸ್ಗಳಲ್ಲಿ 9.2ರ ಸರಾಸರಿಯಲ್ಲಿ 10,6, 0,24 ಹಾಗೂ 6 ರನ್ ಗಳಿಸಿದ್ದರು. ಸ್ವದೇಶದ ಪಿಚ್ನಲ್ಲಿ ಸ್ಪೆಷಲಿಸ್ಟ್ ಅಗ್ರ ಸರದಿಯ ಬ್ಯಾಟರ್ ಆಗಿ ಸ್ಯಾಮ್ಸನ್ ನೀರಸ ಪ್ರದರ್ಶನ ನೀಡಿದ್ದರು.
ತಿಲಕ್ ವರ್ಮಾ ಗಾಯಗೊಂಡ ಕಾರಣ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ರಾಯ್ಪುರದಲ್ಲಿ 32 ಎಸೆತಗಳಲ್ಲಿ 76 ರನ್, ಗುವಾಹಟಿಯಲ್ಲಿ 28 ರನ್, ಸರಣಿಯ ಕೊನೆಯ ಪಂದ್ಯದಲ್ಲಿ 43 ಎಸೆತಗಳಲ್ಲಿ 103 ರನ್ ಗಳಿಸಿದ್ದರು. 53.75ರ ಸರಾಸರಿಯಲ್ಲಿ 231.19ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 215 ರನ್ ಗಳಿಸಿದ್ದರು. ಕಿಶನ್ ಭಾರತದ ಅಗ್ರ ಸರದಿಯನ್ನು ಬಲಿಷ್ಠಗೊಳಿಸಿದ್ದಲ್ಲದೆ ಅಗ್ರ ಕ್ರಮಾಂಕದಲ್ಲಿ ಸ್ಯಾಮ್ಸನ್ ಸ್ಥಾನಕ್ಕೆ ನೇರ ಸವಾಲು ಒಡ್ಡಿದ್ದಾರೆ.
ತಿಲಕ್ ವರ್ಮಾ ಗಾಯದಿಂದ ಚೇತರಿಸಿಕೊಂಡು ಆಡುವ 11ರ ಬಳಗಕ್ಕೆ ವಾಪಸಾದರೆ ಕಿಶನ್ ದೊಡ್ಡ ತಲೆನೋವಾಗಬಹುದು. ಎಡಗೈ ಬ್ಯಾಟರ್ ಕಿಶನ್ರನ್ನು ಕೈಬಿಡುವುದು ಸುಲಭದ ಮಾತಲ್ಲ.
ಸ್ಯಾಮ್ಸನ್ ಭಾರತದ ಪರ ಒಟ್ಟು 57 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2024ರ ಟಿ-20 ವಿಶ್ವಕಪ್ ನಂತರ 33 ಪಂದ್ಯಗಳನ್ನಾಡಿದ್ದಾರೆ.
ಭಾರತ ತಂಡವು ಫೆ.7ರಂದು ಅಮೆರಿಕದ ವಿರುದ್ಧ ಮುಂಬೈನಲ್ಲಿ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಟೀಮ್ ಮ್ಯಾನೇಜ್ಮೆಂಟ್ ಸ್ಯಾಮ್ಸನ್ರನ್ನು ಹಿಂದಿನ ದಾಖಲೆಯನ್ನು ನೋಡಿ ಉಳಿಸಿಕೊಳ್ಳಲಿದೆಯೇ, ಇಶಾನ್ ಕಿಶನ್ ಅವರ ಈಗಿನ ಫಾರ್ಮ್ ಕಡೆಗಣಿಸಲಿದೆಯೇ?ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.







