ಇಸ್ಲಾಮಾಬಾದ್ನಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆ : ತ್ರಿಕೋನ ಸರಣಿಯನ್ನು ರಾವಲ್ಪಿಂಡಿಗೆ ಸ್ಥಳಾಂತರಿಸಿದ ಪಿಸಿಬಿ

Photo Credit : PTI
ಕರಾಚಿ, ನ.13: ಮುಂಬರುವ ಪಾಕಿಸ್ತಾನ, ಶ್ರೀಲಂಕಾ ಹಾಗೂ ಝಿಂಬಾಬ್ವೆ ಒಳಗೊಂಡಿರುವ ಟಿ-20 ತ್ರಿಕೋನ ಸರಣಿಯ ಎಲ್ಲ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗುರುವಾರ ದೃಢಪಡಿಸಿದೆ.
ಇಸ್ಲಾಮಾಬಾದ್ನಲ್ಲಿ ಇತ್ತೀಚೆಗೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಂದ್ಯಾವಳಿಯನ್ನು ಒಂದೇ ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ತ್ರಿಕೋನ ಸರಣಿಯು ನ.18ರಂದು ಆರಂಭವಾಗಲಿದ್ದು, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಝಿಂಬಾಬ್ವೆ ತಂಡವನ್ನು ಎದುರಿಸಲಿದೆ. ನ.29ರಂದು ನಡೆಯಲಿರುವ ಫೈನಲ್ ಸಹಿತ ಎಲ್ಲ ಪಂದ್ಯಗಳು ಸ್ಥಳೀಯ ಕಾಲಮಾನ ಸಂಜೆ 6ಕ್ಕೆ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಪ್ರತೀ ತಂಡವು ನಾಲ್ಕು ಪಂದ್ಯಗಳನ್ನು ಆಡಲಿದೆ. ಅಗ್ರ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಲಿವೆೆ.
ಇಸ್ಲಾಮಾಬಾದ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 12 ಜನರು ಮೃತಪಟ್ಟ ನಂತರ ಶ್ರೀಲಂಕಾ ಆಟಗಾರರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ ಪಾಕಿಸ್ತಾನದಲ್ಲಿ ಉಳಿದುಕೊಳ್ಳುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರಿಗೆ ಸೂಚಿಸಿದೆ. ಆಂತರಿಕ ಸಚಿವರಾಗಿರುವ ಪಿಸಿಬಿ ಅಧ್ಯಕ್ಷ ಮುಹ್ಸಿನ್ ಖಾನ್ ಅವರು ಶ್ರೀಲಂಕಾದ ಹೈ ಕಮಿಶನರ್ ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ, ಪ್ರವಾಸಿ ತಂಡಕ್ಕೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿದ್ದಾರೆ.





