ಫ್ರಾನ್ಸ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಇಸ್ಮಾಯೀಲ್ ಅಲಭ್ಯ : ಮೊರಾಕ್ಕೊ ತಂಡಕ್ಕೆ ಭಾರೀ ಹಿನ್ನಡೆ

ಇಸ್ಮಾಯೀಲ್ | Photo Credit : AP
ಹ್ಯೂಸ್ಟನ್,ಜು.9: ಫ್ರಾನ್ಸ್ ತಂಡದ ವಿರುದ್ಧ ಗುರುವಾರ ತಡರಾತ್ರಿ ನಡೆಯುವ ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯಕ್ಕಿಂತ ಮೊದಲು ಮೊರಾಕ್ಕೊ ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಆಟಗಾರ ಇಸ್ಮಾಯೀಲ್ ಮಂಡಿರಜ್ಜು ಗಾಯದಿಂದಾಗಿ ಅಂತಿಮ-8ರ ಸುತ್ತಿನ ಪಂದ್ಯಕ್ಕೆ ಲಭ್ಯವಿಲ್ಲ.
ಕೆನಡಾ ತಂಡದ ವಿರುದ್ದ ಮೊರಾಕ್ಕೊ ತಂಡ 3-0 ಗೋಲುಗಳ ಅಂತರದಿಂದ ಗೆದ್ದಿರುವ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಇಸ್ಮಾಯೀಲ್ ಗಾಯಗೊಂಡಿದ್ದರು.
‘‘ಇಸ್ಮಾಯೀಲ್ ಸಂಪೂರ್ಣ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಇನ್ನೂ ಕೆಲವು ಪಂದ್ಯಗಳನ್ನು ಆಡುವ ವಿಶ್ವಾಸ ನಮಗಿದೆ’’ ಎಂದು ಮೊರಾಕ್ಕೊದ ಮುಖ್ಯ ಕೋಚ್ ಮುಹಮ್ಮದ್ ಔಹಾಬಿ ಹೇಳಿದ್ದಾರೆ.
ಇಸ್ಮಾಯೀಲ್ ಪ್ರಸಕ್ತ ಪಂದ್ಯಾವಳಿಯುದ್ದಕ್ಕೂ ಮೊರಾಕ್ಕೊ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಲ್ಲ ಮೂರು ಗ್ರೂಪ್ ಪಂದ್ಯಗಳಲ್ಲಿ ಗೋಲುಗಳನ್ನು ಗಳಿಸಿದ್ದ ಇಸ್ಮಾಯೀಲ್ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದಿರುವ ಪಂದ್ಯದಲ್ಲಿ ನಿರ್ಣಾಯಕ ಗೋಲು ಗಳಿಸಿದ್ದರು.
ಇಸ್ಮಾಯೀಲ್ ಅವರ ಅನುಪಸ್ಥಿತಿಯು ಎರಡು ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಸೋಲುಣಿಸಿ, ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಸೆಮಿ ಫೈನಲ್ಗೆ ತಲುಪುವ ಮೊರಾಕ್ಕೋ ತಂಡದ ಪ್ರಯತ್ನಕ್ಕೆ ತೀವ್ರ ಹಿನ್ನಡೆವುಂಟುಮಾಡಿದೆ.
ಮೊರಾಕ್ಕೊ ಹಾಗೂ ಫ್ರಾನ್ಸ್ ತಂಡಗಳು 2022ರ ಖತರ್ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ನಲ್ಲಿ ಸೆಣಸಾಡಿದ್ದವು. ಆಗ 2-0 ಅಂತರದಿಂದ ಜಯ ಸಾಧಿಸಿದ್ದ ಫ್ರಾನ್ಸ್ ತಂಡವು ಮೊರಾಕ್ಕೊದ ಐತಿಹಾಸಿಕ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತ್ತು.
ಈ ತನಕ ಆಡಿರುವ ಎಲ್ಲ ಐದೂ ಪಂದ್ಯಗಳನ್ನು ಜಯಿಸಿ ಪರಿಪೂರ್ಣ ದಾಖಲೆ ಕಾಯ್ದುಕೊಂಡಿರುವ ಫ್ರಾನ್ಸ್ ತಂಡವು ಸತತ ಮೂರನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ನಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದೆ. ಎಂಬಾಪೆ ಒಟ್ಟು ಏಳು ಗೋಲುಗಳನ್ನು ಗಳಿಸಿದ್ದಾರೆ.






