ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್: 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು

Shiva Narwal, Sarabjot Singh, and Arjun Singh | Photo: Twitter \ @ianuragthakur
ಹೊಸದಿಲ್ಲಿ: ಭಾರತವು ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಗುರುವಾರ ನೀರಸ ಆರಂಭ ಪಡೆದಿದ್ದು, ಸ್ಪರ್ಧೆಯಲ್ಲಿದ್ದ ಆರು 10 ಮೀ. ಏರ್ ಪಿಸ್ತೂಲ್ ಶೂಟರ್ಗಳಲ್ಲಿ ಯಾರೂ ಕೂಡ 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿಲ್ಲ. ಟೀಮ್ ಇವೆಂಟ್ನಲ್ಲಿ ಭಾರತವು ಕಂಚಿನ ಪದಕ ಜಯಿಸಿ ಸಮಾಧಾನಪಟ್ಟುಕೊಂಡಿದೆ.
ಅಝರ್ಬೈಜಾನ್ನ ಬಾಕುವಿನಲ್ಲಿ ಶಿವ ನರ್ವಾಲ್(579 ಪಾಯಿಂಟ್ಸ್), ಸರಬ್ಜೋತ್ ಸಿಂಗ್(578) ಹಾಗೂ ಅರ್ಜುನ್ ಸಿಂಗ್ ಚೀಮಾ(577 ಅಂಕ) ಅವರನ್ನೊಳಗೊಂಡ ಭಾರತದ ಪುರುಷರ 10 ಮೀ. ಏರ್ ಪಿಸ್ತೂಲ್ ಟೀಮ್ ಒಟ್ಟು 1734 ಅಂಕ ಗಳಿಸಿ ಕಂಚಿನ ಪದಕ ಜಯಿಸಿದೆ.
1,749 ಅಂಕ ಗಳಿಸಿರುವ ಚೀನಾ ತಂಡ ಚಿನ್ನ ಜಯಿಸಿದರೆ, 1,743 ಅಂಕ ಕಲೆ ಹಾಕಿದ್ದ ಜರ್ಮನಿ ತಂಡ ಬೆಳ್ಳಿ ಪದಕ ಜಯಿಸಿತು.
ಒಂದೇ ದಿನ ಚೀನಾದ ಶೂಟರ್ ಗಳು ಎಲ್ಲ 4 ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಭಾರತೀಯ ಪುರುಷ ಶೂಟರ್ ಗಳು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಯಾರೂ ಕೂಡ 8 ಸ್ಪರ್ಧಿಗಳಿರುವ ಫೈನಲ್ಗೆ ತಲುಪಿಲ್ಲ.
ಅರ್ಹತಾ ಸುತ್ತಿನ ನಂತರ ನರ್ವಾಲ್(579) 17ನೇ ಸ್ಥಾನ ಪಡೆದರೆ, ಸರಬ್ಜೋತ್ (578 ಅಂಕ) 18ನೇ ಸ್ಥಾನ ಹಾಗೂ ಚೀಮಾ(577) 26ನೇ ಸ್ಥಾನ ಪಡೆದರು.
ಚೀನಾದ ಬೊವೆನ್(244.3)ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದರೆ, ಸರ್ಬಿಯದ ಡಮಿರ್ ಮಿಕೆಕ್ (240.8) ಹಾಗೂ ಬಲ್ಗೇರಿಯದ ಕಿರಿಲ್ ಕಿರೊವ್ (215.7) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.
10 ಮೀ. ಏರ್ ಪಿಸ್ತೂಲ್ ಸ್ಫರ್ಧೆಯಲ್ಲಿ ಭಾರತದ ಮಹಿಳಾ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಟೀಮ್ ಇವೆಂಟ್ನಲ್ಲಿ ಇಶಾ ಸಿಂಗ್(572), ಪಾಲಕ್(570) ಹಾಗೂ ದಿವ್ಯಾ(566)ಒಟ್ಟು 1,708 ಅಂಕ ಗಳಿಸಿ 11ನೇ ಸ್ಥಾನ ಪಡೆದರು.
ವೈಯಕ್ತಿಕ ವಿಭಾಗದಲ್ಲಿ ಇಶಾ 572 ಅಂಕ ಗಳಿಸಿ 32ನೇ ಸ್ಥಾನ ಪಡೆದರೆ, ಪಾಲಕ್ (570)40ನೇ ಹಾಗೂ ದಿವ್ಯಾ(566)66ನೇ ಸ್ಥಾನ ಪಡೆದರು.
ವಿಶ್ವ ಚಾಂಪಿಯನ್ಶಿಪ್ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತಾ ಟೂರ್ನಿಯಾಗಿದೆ.







