ಐಎಸ್ಎಸ್ಎಫ್ ವಿಶ್ವಕಪ್: ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಅನುರಾಧಾ ದೇವಿಗೆ ಬೆಳ್ಳಿ

Photo: timesofindia
ಕೈರೋ (ಈಜಿಪ್ಟ್): ಈಜಿಪ್ಟ್ನ ಕೈರೋ ನಗರದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾರತದ ಅನುರಾಧಾ ದೇವಿ ಶುಕ್ರವಾರ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
33 ವರ್ಷದ ಅನುರಾಧಾ ಕೊನೆಯ ಎಂಟನೇ ಸ್ಥಾನದಲ್ಲಿ ಫೈನಲ್ ಪ್ರವೇಶಿಸಿ ಎರಡನೇಯವರಾಗಿ ಹೊರಹೊಮ್ಮಿದರು. ಒಲಿಂಪಿಕ್ ವರ್ಷದಲ್ಲಿ ನಡೆಯುತ್ತಿರುವ ಆರು ಐಎಸ್ಎಸ್ಎಫ್ ವಿಶ್ವಕಪ್ಗಳ ಪೈಕಿ ಮೊದಲ ಪಂದ್ಯಾವಳಿಯಲ್ಲಿ ಭಾರತದ ಮೊದಲ ಪದಕವನ್ನು ಅವರು ಗೆದ್ದಿದ್ದಾರೆ.
ರಿಯೋ ಒಲಿಂಪಿಕ್ ಚಾಂಪಿಯನ್ ಗ್ರೀಸ್ನ ಆನಾ ಕೊರಕಾಕಿ ಚಿನ್ನದ ಪದಕ ಗೆದ್ದರು. ಇದಕ್ಕೂ ಮೊದಲು, ಭಾರತದ ಸಾಗರ್ ಡಾಂಗಿ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ತಲುಪಿದ್ದರೂ, ಆರನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ಗೆ ಆಯ್ಕೆಯಾಗಿರುವ ರಿದಮ್ ಸಂಗವಾನ್ ಕೂಡ ಮಹಿಳೆಯರ ವಿಭಾಗದ ಫೈನಲ್ಗೆ ಮೊದಲನೆಯವರಾಗಿ ತಲುಪಿದ್ದರು. ಆದರೆ, ಅವರು ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಅನುರಾಧಾ 575 ಅಂಕಗಳನ್ನು ಗಳಿಸಿ ಕೊನೆಯವರಾಗಿ ಫೈನಲ್ ತಲುಪಿದರು. ಆದರೆ, ಫೈನಲ್ನಲ್ಲಿ ಅವರು ದಿಟ್ಟ ಪ್ರದರ್ಶ ನೀಡಿದರು. ಮಹಿಳೆಯರ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ 15ನೇ ಸ್ಥಾನ ಪಡೆದರು.





