ಐಎಸ್ ಎಸ್ ಎಫ್ ವಿಶ್ವಕಪ್: ಚಿನ್ನ ಗೆದ್ದುಕೊಂಡ ಒಲಿಂಪಿಯನ್ ಎಲವೆನಿಲ್ ವಲರಿವನ್

Photo: Twitter
ಹೊಸದಿಲ್ಲಿ: ಬ್ರೆಝಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಇಂಟರ್ ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ISSF) ವಿಶ್ವಕಪ್ ರೈಫಲ್/ಪಿಸ್ತೂಲ್ ಸ್ಪರ್ಧೆಯಲ್ಲಿ ಒಲಿಂಪಿಯನ್ ಎಲವೆನಿಲ್ ವಲರಿವನ್ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಎರಡನೇ ಬಾರಿ ಚಿನ್ನ ಪದಕ ಗೆದ್ದರು.
ಎಲವೆನಿಲ್ ಅವರು 24 ಶಾಟ್ ಗಳ ಉದ್ದಕ್ಕೂ 10.1 ಕ್ಕಿಂತ ಕಡಿಮೆ ಸ್ಕೋರ್ ಮಾಡಲಿಲ್ಲ, ಪ್ರಬಲ ಎಂಟು ಸ್ಪರ್ಧಿಗಳಿದ್ದ ಫೈನಲ್ ಕಣದಲ್ಲಿ ಪರಿಪೂರ್ಣ ಪ್ರದರ್ಶನ ನೀಡಿರುವ ಎಲವೆನಿಲ್ ಅವರು 252.2 ಅಂಕ ಗಳಿಸಿ ಚಿನ್ನ ಜಯಿಸಿದರು.
251.9 ಅಂಕಗಳೊಂದಿಗೆಫ್ರಾನ್ಸ್ ನ 20 ವರ್ಷದ ಶೂಟರ್ ಓಸಿಯಾನ್ನೆ ಮುಲ್ಲರ್ ಅವರು ಬೆಳ್ಳಿ ಪದಕ ಜಯಿಸಿದರು. ಚೀನಾದ ಝಾಂಗ್ ಜಿಯಾಲೆ ಕಂಚು ಪಡೆದರು.
ಎಲವೆನಿಲ್ 630.5 ಅಂಕಗಳೊಂದಿಗೆ ಎಂಟನೇ ಮತ್ತು ಅಂತಿಮ ಸ್ಥಾನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದರು.
ಮುಲ್ಲರ್ 633.7 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. ಇಬ್ಬರು ಚೀನೀ ಶೂಟರ್ ಗಳಾದ ಝಾಂಗ್ ಜಿಯಾಲೆ ಮತ್ತು ಝಾಂಗ್ ಯು (ಒಲಿಂಪಿಯನ್) ಹಾಗೂ ನಾರ್ವೆಯ ಹಾಲಿ ಯುರೋಪಿಯನ್ ಚಾಂಪಿಯನ್ ಜೀನೆಟ್ ಹೆಗ್ ಡ್ಯುಸ್ಟಾಡ್ ಕೂಡ ಅಂತಿಮ ಸ್ಪರ್ಧಿಗಳಲ್ಲಿ ಸೇರಿದ್ದಾರೆ.
ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಸ್ಪರ್ಧಿ ಸಂದೀಪ್ ಸಿಂಗ್ 628.2 ಅಂಕ ಗಳಿಸಿ 14ನೇ ಸ್ಥಾನ ಪಡೆದರು.
ಶುಕ್ರವಾರ, ಎಲವೆನಿಲ್ ಅವರು ಸಂದೀಪ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿ 629.1 ಸ್ಕೋರ್ನೊಂದಿಗೆ ಐದನೇ ಸ್ಥಾನ ಪಡೆದರು.







