ನನ್ನ ಭವಿಷ್ಯದ ನಿರ್ಧಾರ ಬಿಸಿಸಿಐ ಕೈನಲ್ಲಿದೆ, ಆದರೆ ನನ್ನ ಯಶಸ್ಸುಗಳನ್ನು ಮರೆಯಬೇಡಿ: ತೀವ್ರ ಟೀಕೆಯ ಮಧ್ಯೆ ಗೌತಮ್ ಗಂಭೀರ್ ಪ್ರತಿಕ್ರಿಯೆ

ಗುವಾಹಟಿ: ದಕ್ಷಿಣ ಆಫ್ರಿಕಾ ತಂಡದೆದುರು ಭಾರತ ತಂಡ ತವರಿನಲ್ಲೇ ಹೀನಾಯ ಸೋಲು ಅನುಭವಿಸಿದ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಗೌತಮ್ ಗಂಭೀರ್, “ನನ್ನ ಭವಿಷ್ಯದ ನಿರ್ಧಾರ ಬಿಸಿಸಿಐ ಕೈನಲ್ಲಿದೆ. ಆದರೆ, ನನ್ನ ಯಶಸ್ಸುಗಳನ್ನು ಮರೆಯಬೇಡಿ” ಎಂದು ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದೆದುರು ಭಾರತ ತಂಡ 0-2 ಅಂತರದಲ್ಲಿ ಹೀನಾಯವಾಗಿ ಸೋತ ಬಳಿಕ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌತಮ್ ಗಂಭೀರ್, “ನನ್ನ ಭವಿಷ್ಯವನ್ನು ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟಿದ್ದು. ಇಂಗ್ಲೆಂಡ್ ವಿರುದ್ಧದ ಫಲಿತಾಂಶ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲೂ ನಾನೇ ತಂಡದ ತರಬೇತುದಾರನಾಗಿದ್ದೆ” ಎಂದು ತಮ್ಮ ಟೀಕಾಕಾರರಿಗೆ ಪರೋಕ್ಷ ತಿರುಗೇಟು ನೀಡಿದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 2-2 ಅಂತರದ ಸಮಬಲ ಸಾಧಿಸಿದರೆ, ಈ ವರ್ಷದ ಆರಂಭದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತ್ತು.
“ಎಲ್ಲರ ಮೇಲೂ ದೂಷಣೆಗಳಿದ್ದರೂ, ಅದು ನನ್ನಿಂದಲೇ ಮೊದಲಿಗೆ ಪ್ರಾರಂಭವಾಗುತ್ತದೆ” ಎಂದು ಗೌತಮ್ ಗಂಭೀರ್ ಹೇಳಿದರು.
ಗುವಾಹಟಿಯಲ್ಲಿ ನಡೆದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 408 ರನ್ ಗಳ ಬೃಹತ್ ಅಂತರದಲ್ಲಿ ಪರಾಭವಗೊಂಡಿದ್ದಲ್ಲದೆ, ದಕ್ಷಿಣ ಆಫ್ರಿಕಾ ತಂಡದೆದುರಿನ ಎರಡೂ ಪಂದ್ಯಗಳನ್ನೂ ಸೋಲುವ ಮೂಲಕ ವೈಟ್ ವಾಶ್ ಆಗಿತ್ತು. ಇದರ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಯ ಕುರಿತು ಕ್ರಿಕೆಟ್ ವಲಯದಲ್ಲಿ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ.







