ಇಟಾಲಿಯನ್ ಓಪನ್: ಪವೊಲಿನಿಗೆ ಸಿಂಗಲ್ಸ್, ಡಬಲ್ಸ್ ಪ್ರಶಸ್ತಿ
1990ರ ಬಳಿಕ ಅವಳಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳೆ

ಜಾಸ್ಮಿನ್ ಪವೊಲಿನಿ | PC : X \ @JasminePaolini
ರೋಮ್: ಇಟಲಿಯ ಜಾಸ್ಮಿನ್ ಪವೊಲಿನಿ, 1990ರಲ್ಲಿ ಮೋನಿಕಾ ಸೆಲಿಸ್ ಬಳಿಕ ಇಟಾಲಿಯನ್ ಓಪನ್ ಸಿಂಗಲ್ಸ್ ಮತ್ತು ಡಬಲ್ಸ್ ಪ್ರಶಸ್ತಿಗಳೆರಡನ್ನೂ ಗೆದ್ದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಅವರು ರವಿವಾರ ಮಹಿಳೆಯರ ಡಬಲ್ಸ್ನಲ್ಲಿ ಇಟಲಿಯವರೇ ಆದ ಸಾರಾ ಎರಾನಿ ಜೊತೆ ಸೇರಿ ರಶ್ಯದ ವೆರೋನಿಕಾ ಕುದರ್ಮೆಟೊವ ಮತ್ತು ಬೆಲ್ಜಿಯಮ್ ನ ಎಲಿಸ್ ಮರ್ಟನ್ಸ್ ಜೋಡಿಯನ್ನು 6-4, 7-5 ಸೆಟ್ಗಳಿಂದ ಪರಾಭವಗೊಳಿಸಿದರು.
ಇದಕ್ಕೂ ಮುನ್ನ ಶನಿವಾರ, ಪವೊಲಿನಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಅವರು ಫೈನಲ್ ನಲ್ಲಿ ಅಮೆರಿಕದ ಕೋಕೊ ಗೌಫ್ರನ್ನು 6-4, 6-2 ಸೆಟ್ಗಳಿಂದ ಮಣಿಸಿದ್ದರು.
ರವಿವಾರ ಇಟಲಿ ಜೋಡಿಯು ಎರಡೂ ಸೆಟ್ಗಳಲ್ಲಿ ನಾಲ್ಕು ಗೇಮ್ ಗಳ ಹಿನ್ನಡೆಯನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿತು.
ಪವೊಲಿನಿ 1000 ಸೀರೀಸ್ ಪಂದ್ಯಾವಳಿಯೊಂದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಪ್ರಶಸ್ತಿಗಳನ್ನು ಗೆದ್ದಿರುವ ಎರಡನೇ ಮಹಿಳೆಯಾಗಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು 2009ರಲ್ಲಿ ಇಂಡಿಯನ್ ವೆಲ್ಸ್ ನಲ್ಲಿ ವೆರಾ ರ್ವೊನರೆವ ಮಾಡಿದ್ದರು.
ಬೋಲ್ಡ್/1985ರ ಬಳಿಕ ಮೊದಲ ಸಿಂಗಲ್ಸ್ ಪ್ರಶಸ್ತಿ
1985ರಲ್ಲಿ ಇಟಾಲಿಯನ್ ಓಪನ್ ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ರಫೇಲಾ ರೆಗಿ ಗೆದ್ದ ಬಳಿಕ, ಈ ಪ್ರಶಸ್ತಿ ಗೆದ್ದ ಮೊದಲ ಇಟಲಿ ಆಟಗಾರ್ತಿ ಪವೊಲಿನಿ ಆಗಿದ್ದಾರೆ.ಇದು ಪವೊಲಿನಿಯ ಎರಡನೇ 1000 ಸೀರೀಸ್ ಪ್ರಶಸ್ತಿಯೂ ಆಗಿದೆ.
ಶನಿವಾರ ಇಟಲಿ ರಾಜಧಾನಿಯಲ್ಲಿ ನಡೆದ ಪಂದ್ಯದಲ್ಲಿ ಪವೊಲಿನಿ ತನ್ನ ದೇಶದ ಅಭಿಮಾನಿಗಳನ್ನು ತನ್ನ ಆಟದ ಮೂಲಕ ರಂಜಿಸಿದರು. 29 ವರ್ಷದ ಪವೊಲಿನಿ ಓಪನ್ ಪಂದ್ಯಾವಳಿಗಳ ಕಾಲದಲ್ಲಿ ಚೊಚ್ಚಲ ಇಟಾಲಿಯನ್ ಓಪನ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ್ತಿ ಆಗಿದ್ದಾರೆ.
ಕೋಕೊ ಗೌಫ್ 55 ಅನ್ಫೋರ್ಸ್ಡ್ ಎರರ್ಗಳು ಮತ್ತು ಸರ್ವ್ಗಳಲ್ಲಿ ಏಳು ಡಬಲ್ ಫಾಲ್ಟ್ಗಳನ್ನು ಮಾಡಿ ಎದುರಾಳಿ ಪವೊಲಿನಿಯ ಹಾದಿಯನ್ನು ಸುಗಮಗೊಳಿಸಿದರು.







