ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್ಗೆ ಇಟಲಿ, ಉಗಾಂಡ

PhotoCredit : icc
ಹೊಸದಿಲ್ಲಿ, ಆ. 18: ತಾಂಜಾನಿಯಾದಲ್ಲಿ ನಡೆದ ಚಾಲೆಂಜ್ ಲೀಗ್ ‘ಬಿ’ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ಇಟಲಿ ಮತ್ತು ಉಗಾಂಡ ತಂಡಗಳು ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪ್ಲೇ-ಆಫ್ನಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ.
ಮೂರು ಹಂತಗಳ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಇನ್ನೂ ಒಂದು ಪಂದ್ಯದಿನ ಬಾಕಿ ಇರುವಂತೆಯೇ, ಅವುಗಳ ಸ್ಥಾನವನ್ನು ಬೇರೆ ತಂಡಗಳು ಪಡೆಯುವುದು ಅಸಾಧ್ಯ ಎನ್ನುವುದು ಖಚಿತವಾಯಿತು. ಹಾಗಾಗಿ, ಅವುಗಳು ಕ್ವಾಲಿಫೈಯರ್ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡವು.
ಆರು ತಂಡಗಳ ಗುಂಪಿನಲ್ಲಿ ಈ ಎರಡು ತಂಡಗಳಲ್ಲದೆ, ಆತಿಥೇಯ ತಾಂಜಾನಿಯಾ, ಹಾಂಕಾಂಗ್, ಬಹರೈನ್ ಮತ್ತು ಸಿಂಗಾಪುರ ತಂಡಗಳಿದ್ದವು.
ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೊಂದಿದ್ದ ಏಕೈಕ ತಂಡವಾದ ಹಾಂಕಾಂಗ್ ವಿರುದ್ಧ ಇಟಲಿ 6 ವಿಕೆಟ್ಗಳ ಸುಲಭ ಜಯ ಸಾಧಿಸುವ ಮೂಲಕ ಎರಡೂ ತಂಡಗಳ ಸ್ಥಾನಗಳನ್ನು ಭದ್ರಪಡಿಸಿತು.
ಕ್ವಾಲಿಫೈಯರ್ ಪ್ಲೇಆಫ್ಗೆ ಇಟಲಿ ಮತ್ತು ಉಗಾಂಡ ಅಲ್ಲದೆ, ಕ್ರಿಕೆಟ್ ವಿಶ್ವಕಪ್ ಲೀಗ್ 2ರ ಕೊನೆಯ ನಾಲ್ಕು ತಂಡಗಳು (ನಮೀಬಿಯಾ, ಕೆನಡಾ, ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್) ಹಾಗೂ ಚಾಲೆಂಜ್ ಲೀಗ್ ಎ ಗುಂಪಿನ ಅಗ್ರ ಎರಡು ತಂಡಗಳು (ಜರ್ಸಿ ಮತ್ತು ಕುವೈತ್) ಅರ್ಹತೆ ಪಡೆದುಕೊಂಡಿವೆ.
ಈ ಪ್ಲೇ-ಆಫ್ ಪಂದ್ಯಗಳನ್ನು ಏಕದಿನ ಪಂದ್ಯಗಳೆಂಬುದಾಗಿ ಪರಿಗಣಿಸಲಾಗುತ್ತದೆ. ಅಂದರೆ ಈ ತಂಡಗಳಿಗೆ ತಾತ್ಕಾಲಿಕ ಏಕದಿನ ತಂಡದ ಸ್ಥಾನಮಾನ ದೊರೆಯಲಿದೆ.
ಪ್ಲೇ-ಆಫ್ನಿಂದ ಅಗ್ರ ನಾಲ್ಕು ತಂಡಗಳು 2027ರ ಏಕದಿನ ವಿಶ್ವಕಪ್ನ ಮುಖ್ಯ ಕ್ವಾಲಿಫೈಯರ್ ಹಂತಕ್ಕೆ ಮುನ್ನಡೆಯಲಿವೆ.






