ರಾಜಸ್ಥಾನ ವಿರುದ್ಧ ಹೀನಾಯ ಸೋಲಿನ ನಡುವೆಯೂ ಧೋನಿ ದಾಖಲೆ ಮುರಿದ ಜೇಮೀ ಓವರ್ಟನ್!

PC: x.com/timesnowsports
ಗುವಾಹತಿ: ಇಲ್ಲಿನ ಬರ್ಸಾಪಾರಾ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಋತುವಿನ ಐಪಿಎಲ್ ಅಭಿಯಾನ ಆರಂಭಿಸಿದೆ. ಆದಾಗ್ಯೂ ಸಿಎಸ್ಕೆ ತಂಡದ ಜೇಮೀ ಓವರ್ಟನ್ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದರು. ಸಿಎಸ್ ಕೆ 8 ವಿಕೆಟ್ ನಷ್ಟಕ್ಕೆ 82 ರನ್ ಗಳನ್ನು ಗಳಿಸಿ ಕುಂಟುತ್ತಿದ್ದ ಸ್ಥಿತಿಯಲ್ಲಿ ಓವರ್ಟನ್ 36 ಎಸೆತಗಳಲ್ಲಿ 43 ರನ್ ಸಿಡಿಸಿ ಈ ದಾಖಲೆ ಬರೆದರು. ಸಿಎಸ್ ಕೆ ಪರ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಕ್ರೀಸ್ ಗೆ ಆಗಮಿಸಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಜೇಮೀ ಪಾತ್ರರಾದರು. ಈ ಮೊದಲು 2024ರ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 37 ರನ್ ಗಳಿಸಿದ್ದ ಎಂ.ಎಸ್.ಧೋನಿ ಹೆಸರಿನಲ್ಲಿ ಈ ದಾಖಲೆ ಇತ್ತು. ತಾಳ್ಮೆ, ಸಮಯಗಾರಿಕೆ, ಶಕ್ತಿಯನ್ನು ಪ್ರದರ್ಶಿಸಿದ ಓವರ್ಟನ್, ಕುಸಿತದ ನಡುವೆಯೂ ತಂಡದ ರಕ್ಷಣೆಗೆ ಏಕಾಂಗಿ ಹೋರಾಟ ನಡೆಸಿದರು.
ಉಳಿದಂತೆ ಸಿಎಸ್ ಕೆ ಬ್ಯಾಟರ್ ಗಳು ಆರಂಭದಿಂದಲೂ ರಾಜಸ್ಥಾನ ರಾಯಲ್ಸ್ ದಾಳಿಗೆ ತತ್ತರಿಸಿದರು. ಸಂಜು ಸ್ಯಾಮ್ಸನ್ ಅವರು ನಾಂಡ್ರೆ ಬರ್ಗರ್ ಎಸೆತದಲ್ಲಿ, ನಾಯಕ ಋತುರಾಜ್ ಗಾಯಕ್ವಾಡ್ ಅವರು ಜೋಫ್ರಾ ಆರ್ಚರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬರ್ಗರ್, ಆರ್ಚರ್ ಹಾಗೂ ರವೀಂದ್ರ ಜಡೇಜಾ ಸಿಎಸ್ ಕೆ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೇವಲ ಎಂಟು ಓವರ್ ಗಳಲ್ಲಿ 57 ರನ್ ಗಳಿಗೆ ಸಿಎಸ್ ಕೆ 6 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಪರ 15 ವರ್ಷದ ಬ್ಯಾಟಿಂಗ್ ತಾರೆ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಐಪಿಎಲ್ ಇತಿಹಾಸದಲ್ಲೇ ಮೂರನೇ ಅತಿವೇಗದ ಅರ್ಧಶತಕ ಗಳಿಸಿದ ಹೆಗ್ಗಳಿಕೆ ಅವರದ್ದಾಯಿತು. ಯಶಸ್ವಿ ಜೈಸ್ವಾಲ್ (36 ಎಸೆತಗಳಲ್ಲಿ ಅಜೇಯ 38) ಹಾಗೂ ರಿಯಾನ್ ಪರಾಗ್ (11 ಎಸೆತಗಳಲ್ಲಿ ಅಜೇಯ 14) ಅವರು ಕೇವಲ 12.1 ಓವರ್ ಗಳಲ್ಲೇ ಗೆಲುವಿನ ದಡ ಸೇರಿಸಿದರು.






