ಭಾರತ ವಿರುದ್ಧ ಮೊದಲ 2 ಏಕದಿನ ಪಂದ್ಯಗಳಿಗೆ ಜೇಮೀ ಸ್ಮಿತ್ ಅನುಮಾನ

ಜೇಮೀ ಸ್ಮಿತ್ | PTI
ಮುಂಬೈ : ಕಾಲಿನ ಮೀನಖಂಡದ ಗಾಯದಿಂದ ಬಳಲುತ್ತಿರುವ ಇಂಗ್ಲೆಂಡ್ ವಿಕೆಟ್ಕೀಪರ್-ಬ್ಯಾಟರ್ ಜೇಮೀ ಸ್ಮಿತ್ ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಲಭ್ಯರಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ, ಈ ತಿಂಗಳ ಕೊನೆಯ ಭಾಗದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಅವರು ಸಮರ್ಥರಾಗುವ ನಿರೀಕ್ಷೆಯಿದೆ.
ರಾಜ್ಕೋಟ್ನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದ ವೇಳೆ ಸ್ಮಿತ್ರ ಕಾಲಿನ ಮೀನಖಂಡಕ್ಕೆ ಗಾಯವಾಗಿತ್ತು. ಟಿ20 ಸರಣಿಯಲ್ಲಿ ಇಂಗ್ಲೆಂಡ್ ಗೆದ್ದ ಏಕೈಕ ಪಂದ್ಯ ಅದಾಗಿತ್ತು. ಅವರು ಎರಡು ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಜೇಕಬ್ ಬೆಥೆಲ್ರ ಸ್ಥಾನವನ್ನು ವಹಿಸಿಕೊಂಡಿದ್ದರು. ಅವರು ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಭಾರತ ಸರಣಿಯನ್ನು 4-1ರಿಂದ ಗೆದ್ದಿದೆ.
ಅಹ್ಮದಾಬಾದ್ನಲ್ಲಿ ಮುಂದಿನ ಬುಧವಾರ ನಡೆಯಲಿರುವ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 24 ವರ್ಷದ ಸ್ಮಿತ್ರನ್ನು ದೈಹಿಕ ಕ್ಷಮತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ‘ಡೇಲಿ ಮೇಲ್’ ವರದಿಯೊಂದು ತಿಳಿಸಿದೆ.
ಏಕದಿನ ಸರಣಿಯಲ್ಲಿ ಆಡಲು ಜೋ ರೂಟ್ ಬಂದಿರುವರಾದರೂ, ಸ್ಮಿತ್ರ ಅಲಭ್ಯತೆಯು ಪ್ರವಾಸಿ ತಂಡದ ಬ್ಯಾಟಿಂಗ್ ಆಯ್ಕೆಗಳನ್ನು ನಿರ್ಬಂಧಿಸುತ್ತದೆ. ರೂಟ್ ಅವರು ರೆಹಾನ್ ಅಹ್ಮದ್ರ ಸ್ಥಾನವನ್ನು ತುಂಬಬೇಕಾಗಿತ್ತು. ಆದರೆ ರೆಹಾನ್ರನ್ನು ಏಕದಿನ ಪಂದ್ಯಗಳಿಗೆ ಉಳಿಸಿಕೊಳ್ಳಲಾಗಿದೆ.
ಮೊದಲ ಏಕದಿನ ಪಂದ್ಯವು ಗುರುವಾರ ನಾಗಪುರದಲ್ಲಿ ನಡೆಯಲಿದೆ. ಕೊನೆಯ ಪಂದ್ಯವು ಫೆಬ್ರವರಿ 12ಕ್ಕೆ ನಿಗದಿಯಾಗಿದೆ.