4 ಗಂಟೆಗೆ ಎದ್ದು ತರಕಾರಿ ಮಾರುತ್ತಿದ್ದ ಜಂಡು ಕುಮಾರ್ ಗೆ ಪ್ಯಾರಾ ವೇಟ್ ಲಿಫ್ಟಿಂಗ್ ನಲ್ಲಿ ಕಂಚು!

ಜಂಡು ಕುಮಾರ್ | Photo Credit : PTI
ಗ್ಲಾಸ್ಗೊ, ಜು. 25: ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2026 ಕ್ರೀಡಾಕೂಟದಲ್ಲಿ, ಶುಕ್ರವಾರ ನಡೆದ ಪುರುಷರ ಹೆವಿವೇಟ್ ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತ ತನ್ನ ಪದಕಗಳ ಖಾತೆಯನ್ನು ಆರಂಭಿಸಿದೆ.
‘ಬಿ’ ಗುಂಪಿನಲ್ಲಿ ಸ್ಪರ್ಧಿಸಿದ ಜಂಡು, ಮೊದಲ ಪ್ರಯತ್ನದಲ್ಲಿ 181 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ನಂತರ ತಮ್ಮ ಎರಡನೇ ಪ್ರಯತ್ನದಲ್ಲಿ 190 ಕೆಜಿ ಎತ್ತಿ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡರು. ಅವರು ಅಂತಿಮ ಯತ್ನದಲ್ಲಿ 196 ಕೆಜಿ ಎತ್ತಲು ಪ್ರಯತ್ನಿಸಿದರು. ಆದರೆ, ಅದರಲ್ಲಿ ಯಶಸ್ವಿಯಾಗಲಿಲ್ಲ.
72.4 ಕೆಜಿ ದೇಹತೂಕ ಹೊಂದಿರುವ ಜಂಡು, ತಮ್ಮ ಅತ್ಯುತ್ತಮ ಲಿಫ್ಟ್ಗೆ 130.9 ಅಂಕಗಳನ್ನು ಗಳಿಸಿ ‘ಬಿ’ ಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದರು. ಪ್ರತಿಯೊಬ್ಬ ಕ್ರೀಡಾಪಟುವಿನ ದೇಹತೂಕ ಮತ್ತು ಅವರು ಯಶಸ್ವಿಯಾಗಿ ಎತ್ತಿದ ಭಾರಕ್ಕೆ ಅನುಗುಣವಾಗಿ ಅಂಕಗಳನ್ನು ಲೆಕ್ಕಹಾಕಿ, ‘ಎ’ ಮತ್ತು ‘ಬಿ’ ಗುಂಪಿನ ಸ್ಪರ್ಧಿಗಳ ಸ್ಥಾನಗಳನ್ನು ನಿರ್ಧರಿಸಲಾಯಿತು.
ನೈಜೀರಿಯದ ರಿಲುವಾನ್ ಇದ್ರಿಸ್ 132.8 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಇಂಗ್ಲೆಂಡ್ ನ ಮ್ಯಾಥ್ಯೂ ಹಾಡಿರ್ಂಗ್ 131.0 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಹಾಡಿರ್ಂಗ್ಗಿಂತ ಕೇವಲ 0.1 ಅಂಕದಿಂದ ಹಿಂದಿದ್ದ ಜಂಡು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಇದೇ ಸ್ಪರ್ಧೆಯ ‘ಎ’ ಗುಂಪಿನಲ್ಲಿ ಸ್ಪರ್ಧಿಸಿದ್ದ ಭಾರತದ ಸುಧೀರ್ ಮೊದಲ ಎರಡು ಯತ್ನಗಳಲ್ಲಿ 182 ಕೆಜಿ ಮತ್ತು 183 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಆದರೆ 211 ಕೆಜಿ ಎತ್ತುವ ಅವರ ಅಂತಿಮ ಪ್ರಯತ್ನ ವಿಫಲವಾಯಿತು. ಅವರು 114.1 ಅಂಕಗಳೊಂದಿಗೆ ಪದಕದ ಸ್ಪರ್ಧೆಯಿಂದ ಹೊರಬಿದ್ದರು.
► 4 ಗಂಟೆಗೆ ಎದ್ದು ತರಕಾರಿ ಮಾರುತ್ತಿದ್ದ ಪವರ್ ಲಿಫ್ಟರ್
ಪವರ್ ಲಿಫ್ಟಿಂಗ್ ಕ್ರೀಡೆಗೆ ಬರುವ ಮೊದಲು ಜಂಡು ಬಿಹಾರದ ನಳಂದ ಜಿಲ್ಲೆಯ ತನ್ನ ಊರು ಹರ್ನೌತ್ ನಲ್ಲಿ ತರಕಾರಿ ಮಾರುತ್ತಿದ್ದರು.
ಅವರು ಮುಂಜಾನೆ ನಾಲ್ಕು ಗಂಟೆಗೆ ಎದ್ದು 20 ಕಿಲೋಮೀಟರ್ ದೂರದ ಶರೀಫ್ ಪಟ್ಟಣದ ತರಕಾರಿ ಸಗಟು ಮಾರುಕಟ್ಟೆಯಿಂದ ತರಕಾರಿ ತರಲು ಹೊರಡುತ್ತಿದ್ದರು.
ಕೊನೆಯ ಒಂದು ಕಿಲೋಮೀಟರ್ ತಲುಪಲು ವಾಹನಗಳು ಹೋಗುವ ಮಾರ್ಗ ಇರಲಿಲ್ಲ. ಬಾಲ್ಯದಲ್ಲಿ ಪೋಲಿಯೊದಿಂದಾಗಿ ಕಾಲುಗಳ ಶಕ್ತಿಯನ್ನು ಕಳೆದುಕೊಂಡ 28 ವರ್ಷದ ಜಂಡು ಆ ಕೊನೆಯ ಒಂದು ಕಿಲೋಮೀಟರ್ ದೂರವನ್ನು ಕೈಯಿಂದ ತಿರುಗಿಸುವ ಮೂರು ಚಕ್ರದ ವೀಲ್ಚೇರ್ನಲ್ಲಿ ಕ್ರಮಿಸುತ್ತಿದ್ದರು.
‘‘ಹಾಗಲಕಾಯಿ, ಬೆಂಡೆ ಮತ್ತು ಇತರ ಹಸಿರು ತರಕಾರಿಗಳನ್ನು ಆಯುತ್ತಾ ನಾನು ಮಾರುಕಟ್ಟೆಯನ್ನು ಸುತ್ತುತ್ತಿದ್ದೆ. ಹತ್ತಾರು ಕಿಲೋಗ್ರಾಂ ತರಕಾರಿ ಖರೀದಿಸಿ ಊರಿಗೆ ಮರಳುತ್ತಿದ್ದೆ’’ ಎನ್ನುವುದನ್ನು ಅವರು ಜ್ಞಾಪಿಸಿಕೊಂಡರು.
ತಮ್ಮ ಊರಿನ ರಸ್ತೆ ಬದಿಯಲ್ಲಿ ಅವರು ತರಕಾರಿ ಮಾರುತ್ತಿದ್ದರು. ಲಾಭ ಸಿಗುವ ಬಗ್ಗೆ ಖಾತರಿಯಿರಲಿಲ್ಲ. ಕೆಲವು ದಿನ ಕೈಯಲ್ಲಿ ಕೆಲವು ನೂರು ರೂಪಾಯಿ ಉಳಿದರೆ, ಉಳಿದ ದಿನ ನಷ್ಟವಾಗುತ್ತಿತ್ತು.
‘‘ನಾನು ಸಂಜೆ 4 ಗಂಟೆಗೆ ವ್ಯಾಪಾರ ನಿಲ್ಲಿಸುತ್ತಿದ್ದೆ. ಬಳಿಕ ಜಿಮ್ಗೆ ಹೋಗುತ್ತಿದ್ದೆ. ಜಿಮ್ ನಲ್ಲಿ ಮಾಡುವ ವ್ಯಾಯಾಮ ನನಗೆ ಸಂತೋಷ ಕೊಡುತ್ತಿತ್ತು’’ ಎಂದು ‘ಸ್ಪೋರ್ಟ್ಸ್ಸ್ಟಾರ್’ನೊಂದಿಗೆ ಮಾತನಾಡಿದ ಜಂಡು ಹೇಳಿದ್ದಾರೆ.
► ಸಂವಹನದ ಕೊರತೆಯಿಂದ ಚಿನ್ನ ತಪ್ಪಿತು: ಕೋಚ್
ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ತಮ್ಮ ಗುರಿ ಚಿನ್ನದ ಪದಕವಾಗಿತ್ತು. ಆದರೆ, ‘ಸಣ್ಣ ತಪ್ಪಾದ ಲೆಕ್ಕಾಚಾರ ಮತ್ತು ಸಂವಹನದ ಕೊರತೆ’ಯಿಂದಾಗಿ ಅಗ್ರ ಸ್ಥಾನ ಕೈತಪ್ಪಿತು ಎಂದು ಪ್ಯಾರಾ ಪವರ್ಲಿಫ್ಟರ್ ಜಂಡು ಕುಮಾರ್ ಅವರ ಕೋಚ್ ರಾಜಿಂದರ್ ಸಿಂಗ್ ರಹೇಲು ಹೇಳಿದ್ದಾರೆ.
ಚಿನ್ನದ ಪದಕ ಪಡೆಯಲು ಎಷ್ಟು ಭಾರ ಎತ್ತಬೇಕು ಎಂಬ ಲೆಕ್ಕಾಚಾರವನ್ನು ತಂಡವು ಆಗಲೇ ಮಾಡಿತ್ತು ಹಾಗೂ ಚಿನ್ನದ ಪದಕ ಗೆಲ್ಲುವ ಭರವಸೆಯಲ್ಲಿತ್ತು ಎಂದು ರಹೇಲು ಹೇಳಿದರು.
‘‘ನಾವು ಲೆಕ್ಕಾಚಾರ ಮಾಡಿದ್ದೆವು. ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದೆವು. ಆದರೆ, ಸಂವಹನದ ಕೊರತೆಯಿಂದಾಗಿ ಅದು ತಪ್ಪಿತು. ಆದರೆ, ನಮಗೆ ಸಂತೋಷವಾಗಿದೆ’’ ಎಂದು ಅವರು ಹೇಳಿದರು.






