ಅಲ್ಕರಾಝ್ ಗೆ ಸೋಲುಣಿಸಿ ಎಟಿಪಿ ಫೈನಲ್ಸ್ ಕಿರೀಟ ಗೆದ್ದ ಜನ್ನಿಕ್ ಸಿನ್ನರ್

ಕಾರ್ಲೊಸ್ ಅಲ್ಕರಾಝ್ , ಜನ್ನಿಕ್ ಸಿನ್ನರ್ |Photo Credit : AP \ PTI
ಟುರಿನ್, ನ.17: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ರನ್ನು ಮಣಿಸಿದ ಎರಡನೇ ರ್ಯಾಂಕಿನ ಜನ್ನಿಕ್ ಸಿನ್ನರ್ ಸತತ ಎರಡನೇ ಬಾರಿ ಕಿಕ್ಕಿರಿದು ನೆರೆದಿದ್ದ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರತಿಷ್ಠಿತ ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಟಲಿಯ ಸಿನ್ನರ್ ಸ್ಪೇನ್ ನ ಅಲ್ಕರಾಝ್ರನ್ನು 7-6(7/4), 7-5 ಸೆಟ್ ಗಳ ಅಂತರದಿಂದ ಸದೆ ಬಡಿದರು.
ಪುರುಷರ ಟೆನಿಸ್ ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಉಭಯ ಆಟಗಾರರು ಈ ವರ್ಷ ಆರನೇ ಬಾರಿ ಮುಖಾಮುಖಿಯಾಗಿದ್ದಾರೆ. ಈ ವರ್ಷ ಎರಡನೇ ಬಾರಿ ಅಲ್ಕರಾಝ್ ಗೆ ಸೋಲುಣಿಸಿದ ಸಿನ್ನರ್ ತನ್ನ ತವರು ಇಟಲಿಯ ಅಭಿಮಾನಿಗಳ ಎದುರು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು. ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಅಲ್ಕರಾಝ್ ಗೆ ಸೋಲುಣಿಸಿದ್ದರು.
ತನ್ನ ವೃತ್ತಿಜೀವನದಲ್ಲಿ ಪರಿಪೂರ್ಣ ಪ್ರದರ್ಶನವೊಂದನ್ನು ನೀಡಿದ ಸಿನ್ನರ್ 2025ರ ಋತುವಿಗೆ ಸರಿಯಾದ ಅಂತ್ಯ ಹಾಡಿದರು.
24ರ ಹರೆಯದ ಸಿನ್ನರ್ ಈಗಾಗಲೇ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ವರ್ಷಾಂತ್ಯದ ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮೂರು ತಿಂಗಳ ಅಮಾನತು ಬಳಿಕ ಬಲಿಷ್ಠವಾಗಿ ಪುಟಿದೆದ್ದಿರುವ ಸಿನ್ನರ್ ಪಾಲಿಗೆ ಇದು ಮಹತ್ವದ ಗೆಲುವಾಗಿದೆ.
ಈ ಗೆಲುವಿನ ಮೂಲಕ ಒಳಾಂಗಣ ಪಂದ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಇದೀಗ ಸಿನ್ನರ್ ಒಳಾಂಗಣ ಹಾರ್ಡ್ ಕೋರ್ಟ್ಗಳಲ್ಲಿ ಸತತ 31 ಪಂದ್ಯಗಳನ್ನು ಗೆದ್ದಿದ್ದಾರೆ. 2023ರಲ್ಲಿ ಟುರಿನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತ ನಂತರ ಎಟಿಪಿ ಫೈನಲ್ಸ್ ನಲ್ಲಿ ಸತತ 10ನೇ ಗೆಲುವು ದಾಖಲಿಸಿದ್ದಾರೆ. ಆ ಸೋಲಿನ ನಂತರ ಸಿನ್ನರ್ ಎಟಿಪಿ ಫೈನಲ್ಸ್ ನಲ್ಲಿ ಸೆಟ್ ಕೈಚೆಲ್ಲಿಲ್ಲ.
ಈ ಋತುವಿನಲ್ಲಿ 8 ಪ್ರಶಸ್ತಿಗಳು ಹಾಗೂ ಎರಡು ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಅಲ್ಕರಾಝ್ ಅವರು ‘‘ಇಂದು ನಾನು ಆಡಿರುವ ರೀತಿಯು ನಿಜವಾಗಿಯೂ ಖುಷಿಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಒಳಾಂಗಣದಲ್ಲಿ ಸೋಲರಿಯದ ಆಟಗಾರನ ಎದುರು ಆಡಿದ್ದೇನೆ’’ ಎಂದರು.
‘‘ಇದೊಂದು ನನಗೆ ಅದ್ಭುತ ವರ್ಷವಾಗಿತ್ತು. ಈ ವರ್ಷ ನಾನು ಎಲ್ಲ ನಾಲ್ಕೂ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ ಗೆ ತಲುಪಿದ್ದೆ. ಇಲ್ಲಿಗೆ ಬಂದು ಫೈನಲ್ ಪಂದ್ಯವನ್ನು ಗೆದ್ದಿರುವುದು ಅದ್ಭುತ ಅನುಭವ ನೀಡಿದೆ’’ ಎಂದು ಸಿನ್ನರ್ ಸುದ್ದಿಗಾರರಿಗೆ ತಿಳಿಸಿದರು.







