ಜಪಾನ್ ಫುಟ್ಬಾಲ್ ದಂತಕತೆ ಕುನಿಶಿಗೆ ಕಮಾಮೊಟೊ ನಿಧನ

Photo : x/@j_football_now
ಟೋಕಿಯೊ, ಆ.10: ಜಪಾನಿನ ಫುಟ್ಬಾಲ್ ದಂತಕತೆ ಕುನಿಶಿಗೆ ಕಮಾಮೊಟೊ ರವಿವಾರ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಜಪಾನ್ ತಂಡವನ್ನು 76 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಕಮಾಮೊಟೊ 75 ಗೋಲುಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು.
ಮಾಜಿ ಫಾರ್ವರ್ಡ್ ಆಟಗಾರ ಕಮಾಮೊಟೊ ಅವರು ಸಮುರಾಯ್ ಬ್ಲೂ ಪರ 13 ವರ್ಷಗಳ ಕಾಲ ಆಡಿದ್ದರು. ತಮ್ಮ ಸಂಪೂರ್ಣ ಕ್ಲಬ್ ವೃತ್ತಿಜೀವನವನ್ನು ಈಗ ಸೆರೆಜೊ ಒಸಾಕಾ ಎಂದು ಕರೆಯಲ್ಪಡುವ ಯಾನ್ಮಾರ್ ಡೀಸೆಲ್ನಲ್ಲಿ ಕಳೆದಿದ್ದರು.
‘ಜಪಾನ್ ಫುಟ್ಬಾಲ್ ಅಸೋಸಿಯೇಶನ್ನ ಮಾಜಿ ಉಪಾಧ್ಯಕ್ಷ ಕಮಾಮೊಟೊ ಕುನಿಶಿಗೆ ಅವರು ಕೆಲ ಸಮಯದಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 10ರಂದು ಬೆಳಗ್ಗೆ 4:04ಕ್ಕೆ ಒಸಾಕಾದಲ್ಲಿರುವ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ನಿಧನರಾದರು’ ಎಂದು ಜಪಾನೀಸ್ ಫುಟ್ಬಾಲ್ ಅಸೋಸಿಯೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
1968ರ ಒಲಿಂಪಿಕ್ಸ್ನಲ್ಲಿ ಜಪಾನ್ ತಂಡವು ಕಂಚಿನ ಪದಕ ಜಯಿಸಲು ಕಮಾಮೊಟೊ ನೆರವಾಗಿದ್ದರು. ಒಲಿಂಪಿಕ್ಸ್ನಲ್ಲಿ ಗರಿಷ್ಠ ಗೋಲ್ ಸ್ಕೋರರ್(7 ಗೋಲುಗಳು)ಎನಿಸಿಕೊಂಡಿದ್ದರು. ಇದು ಜಪಾನಿನ ಪುರುಷರ ಫುಟ್ಬಾಲ್ನ ಶ್ರೇಷ್ಠ ಪ್ರದರ್ಶನವಾಗಿದೆ.
2005ರಲ್ಲಿ ಕಮಾಮೊಟೊ ಅವರು ಜಪಾನಿನ ಫುಟ್ಬಾಲ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾಗಿದ್ದರು.





