ಜಪಾನ್ ಮಾಸ್ಟರ್ಸ್ | ಲಕ್ಷ್ಯ ಸೇನ್ ಚಾಂಪಿಯನ್: ಫೈನಲ್ನಲ್ಲಿ ಪುಟಿದೆದ್ದ ಭಾರತದ ಆಟಗಾರ

ಲಕ್ಷ್ಯ ಸೇನ್ | Photo Credit : PTI
ಕುಮಾಮೊಟೊ: ಜಪಾನ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕೊಕಿ ವಟನಬೆ ವಿರುದ್ಧ ಫೈನಲ್ ಪಂದ್ಯದ ಮೊದಲ ಗೇಮ್ ಸೋಲಿನಿಂದ ಬೇಗನೆ ಹೊರಬಂದ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ರವಿವಾರ ಒಂದು ಗಂಟೆ ಹಾಗೂ ನಾಲ್ಕು ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೇನ್ ಮೊದಲ ಗೇಮ್ ಅನ್ನು 13-21 ಅಂತರದಿಂದ ಸೋತರು. ಆದರೆ ಮುಂದಿನ ಎರಡು ಗೇಮ್ಗಳನ್ನು 21-18 ಹಾಗೂ 21-14 ಅಂತರದಿಂದ ಗೆದ್ದುಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದರು.
‘‘ಜಪಾನಿನಲ್ಲಿ ಪ್ರಶಸ್ತಿ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ. ಕಳೆದ ವರ್ಷ ಸೆಮಿ ಫೈನಲ್ನಲ್ಲಿ ಆಡಿದ್ದೆ. ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದ್ದಕ್ಕೆ ಸಂತೋಷವಾಗಿದೆ. ಎರಡನೇ ಸೆಟ್ನಲ್ಲಿ ಆತ್ಮವಿಶ್ವಾಸದಲ್ಲಿದ್ದೆ. ಎರಡು ಹಾಗೂ ಮೂರನೇ ಸೆಟ್ನಲ್ಲಿ ಉತ್ತಮ ಲೆಂಗ್ತ್ಗಾಗಿ ಪ್ರಯತ್ನಿಸಿದ್ದೆ. ಹೆಚ್ಚಿನ ಆಕ್ರಮಣಕಾರಿ ಬ್ಯಾಡ್ಮಿಂಟನ್ ಆಡಿದ್ದೇನೆ’’ ಎಂದು ಸೇನ್ ಗೆಲುವಿನ ನಂತರ ಹೇಳಿದ್ದಾರೆ.
ಹೈಲೊ ಓಪನ್ಗಾಗಿ ಜರ್ಮನಿಗೆ ಆಗಮಿಸುವ ಮೊದಲು 25ರ ಹರೆಯದ ಸೇನ್ ಕಠಿಣ ಹಾದಿ ತುಳಿದಿದ್ದರು. ಹೈಲೊ ಓಪನ್ ಫೈನಲ್ನಲ್ಲಿ ಇಂಡೋನೇಶ್ಯದ ಹಾಲಿ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಅವರನ್ನು 21-17, 21-10 ನೇರ ಗೇಮ್ಗಳಿಂದ ಮಣಿಸಿ ವರ್ಷದ ಮೊದಲ ಪ್ರಶಸ್ತಿಯನ್ನು ಜಯಿಸಿದ್ದರು.
ಕೊರಿಯಾ ಓಪನ್ನಿಂದ ಹಿಂದೆ ಸರಿದ ಹೊರತಾಗಿಯೂ ಸೇನ್ ಅವರು ಜಪಾನ್ ಮಾಸ್ಟರ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
‘‘ಈ ಪಂದ್ಯಾವಳಿಯು ನನಗೆ ಉತ್ತಮ ಅಂಕ ಗಳಿಸಲು ನೆರವಾಗಿದೆ. ಇದೀಗ ನನಗೆ ಇನ್ನೊಂದು ಟೂರ್ನಿ ಹಾಂಕಾಂಗ್ ಓಪನ್ನಲ್ಲಿ ಆಡಬೇಕಾಗಿದೆ. ಆ ಟೂರ್ನಿಯತ್ತ ಗಮನ ವಹಿಸುವೆ’’ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.






