ಜಪಾನ್ ಮಾಸ್ಟರ್ಸ್: ಲಕ್ಷ್ಯ ಸೇನ್ ಶುಭಾರಂಭ

Screengrab : X
ಟೋಕಿಯೊ, ನ.12: ಕುಮಮೊಟೊ ಸಿಟಿಯಲ್ಲಿ ಬುಧವಾರ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-500 ಟೂರ್ನಿ ಜಪಾನ್ ಮಾಸ್ಟರ್ಸ್ ನಲ್ಲಿ ಭಾರತದ ಲಕ್ಷ್ಯ ಸೇನ್ 2ನೇ ಸುತ್ತಿಗೆ ಲಗ್ಗೆ ಇಡುವ ಮೂಲಕ ಶುಭಾರಂಭ ಮಾಡಿದರು.
ಏಳನೇ ಶ್ರೇಯಾಂಕದ ಲಕ್ಷ್ಯ ಸೇನ್ ಸ್ಥಳೀಯ ಆಟಗಾರ ಹಾಗೂ ವಿಶ್ವದ 26ನೇ ರ್ಯಾಂಕಿನ ಕೊಕೊ ವಟನಬೆ ಅವರನ್ನು 39 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 21-12, 21-16 ಗೇಮ್ ಗಳ ಅಂತರದಿಂದ ಮಣಿಸಿದರು.
ಲಕ್ಷ್ಯ ಸೇನ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸಿಂಗಾಪುರದ ಜಿಯಾ ಹೆಂಗ್ ಜೇಸನ್ ರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ಭಾರತದ ಇನ್ನಿಬ್ಬರು ಸಿಂಗಲ್ಸ್ ಆಟಗಾರರಾದ ಕಿರಣ್ ಜಾರ್ಜ್ ಹಾಗೂ ಆಯುಷ್ ಶೆಟ್ಟಿ ನೇರ ಗೇಮ್ ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದರು.
ಮಲೇಶ್ಯದ ಕೊಕೊ ಜಿಂಗ್ ಹಾಂಗ್ ಅವರು ಕಿರಣ್ ರನ್ನು 22-20, 21-10 ಗೇಮ್ ಗಳ ಅಂತರದಿಂದ ಮಣಿಸಿದರೆ, ಜಪಾನಿನ ನಾಲ್ಕನೇ ಶ್ರೇಯಾಂಕದ ಕೊಡೈ ನರೊಕಾ ಅವರು ಆಯುಷ್ ಶೆಟ್ಟಿ ಅವರನ್ನು 21-16, 21-11 ಅಂತರದಿಂದ ಸದೆ ಬಡಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ರೋಹನ್ ಕಪೂರ್ ಹಾಗೂ ಋತ್ವಿಕಾ ಜೋಡಿಯು ಅಮೆರಿಕದ ಪ್ರೆಸ್ಲೆ ಸ್ಮಿತ್ ಹಾಗೂ ಜೆನ್ನಿ ಗಾಯ್ ಎದುರು 12-21, 21-19, 20-22 ಗೇಮ್ ಗಳ ಅಂತರದಿಂದ ಸೋತಿದೆ.







