ಜಪಾನ್ ಓಪನ್: ಲಕ್ಷ್ಯ ಸೇನ್, ಸಾತ್ವಿಕ್-ಚಿರಾಗ್ ಸವಾಲು ಅಂತ್ಯ

ಸಾತ್ವಿಕ್, ಚಿರಾಗ್ | PC : X
ಟೋಕಿಯೊ,ಜು.17: ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾರತೀಯ ಶಟ್ಲರ್ಗಳು ತಮ್ಮ ಪರದಾಟವನ್ನು ಮುಂದುವರಿಸಿದ್ದಾರೆ.
ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಹಾಗೂ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಸೂಪರ್-750 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಗುರುವಾರ ಸುಮಾರು 1 ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.18ನೇ ಆಟಗಾರ ಲಕ್ಷ್ಯ ಸೇನ್ ಅವರು ಜಪಾನಿನ ಕೊಡೈ ನರಯೋಕಾ ವಿರುದ್ಧ 19-21,11-21 ಗೇಮ್ಗಳ ಅಂತರದಿಂದ ಸೋಲನುಭವಿಸಿ ತನ್ನ ಅಸ್ಥಿರ ಪ್ರದರ್ಶನ ಮುಂದುವರಿಸಿದರು.
23ರ ಹರೆಯದ ಸೇನ್ ಚೀನಾದ ವಾಂಗ್ ಝೆಂಗ್ ಕ್ಸಿಂಗ್ ವಿರುದ್ಧ ಆಡಿರುವ ಮೊದಲ ಸುತ್ತಿನ ಪಂದ್ಯದಲ್ಲಿ 21-11,21-18 ಗೇಮ್ಗಳ ಅಂತರದಿಂದ ಜಯ ಸಾಧಿಸಿ ಗಮನ ಸೆಳೆದಿದ್ದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಅವರು ಚೀನಾದ 5ನೇ ಶ್ರೇಯಾಂಕದ ಜೋಡಿ ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧ 22-24, 14-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಈ ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಲಿಯಾಂಗ್ ಹಾಗೂ ವಾಂಗ್ ಅವರು ಹೆಡ್-ಟು-ಹೆಡ್ ದಾಖಲೆಯಲ್ಲಿ ಭಾರತೀಯ ಜೋಡಿಯ ಎದುರು 7-2 ಮುನ್ನಡೆ ಸಾಧಿಸಿದ್ದಾರೆ.
ನಿಧಾನಗತಿಯ ಆರಂಭ ಪಡೆದ ನಂತರ ಭಾರತದ ಜೋಡಿಯು 18-14ರಿಂದ ಮುನ್ನಡೆ ಸಾಧಿಸಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಚೀನಾದ ಜೋಡಿ ಮೊದಲ ಗೇಮ್ ಅನ್ನು ರೋಚಕವಾಗಿ ಗೆದ್ದುಕೊಂಡಿತು.
ಲಿಯಾಂಗ್ ಹಾಗೂ ವಾಂಗ್ 2ನೇ ಗೇಮ್ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿದ್ದು, ಸಾತ್ವಿಕ್ ಹಾಗೂ ಚಿರಾಗ್ ಅವರ ಸ್ಮ್ಯಾಶಸ್ ಹಾಗೂ ಡಿಫೆನ್ಸ್ ನಲ್ಲಿನ ತಪ್ಪುಗಳ ಲಾಭ ಪಡೆದರು. ಈ ಮೂಲಕ ಭಾರತದ ಜೋಡಿಗೆ ನೇರ ಗೇಮ್ ಗಳಿಂದ ಸೋಲುಣಿಸಿದರು







