4ನೇ ಟೆಸ್ಟ್ನಲ್ಲಿ ಜಸ್ ಪ್ರಿತ್ ಬುಮ್ರಾ ಆಡಲಿದ್ದಾರೆ: ಮುಹಮ್ಮದ್ ಸಿರಾಜ್ ಸ್ಪಷ್ಟನೆ

PC : PTI
ಮ್ಯಾಂಚೆಸ್ಟರ್, ಜು.21: ನಾಲ್ಕನೇ ಟೆಸ್ಟ್ನಲ್ಲಿ ಜಸ್ ಪ್ರಿತ್ ಬುಮ್ರಾ, ಆಕಾಶ್ ದೀಪ್ ಆಡಲಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಟೀಮ್ ಇಂಡಿಯಾದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಭಾರತ ತಂಡವು ಸದ್ಯ 5 ಪಂದ್ಯಗಳ ಸರಣಿಯಲ್ಲಿ 1-2ರಿಂದ ಹಿನ್ನಡೆಯಲ್ಲಿದೆ.
ನಿರ್ಣಾಯಕ 4ನೇ ಪಂದ್ಯಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿರಾಜ್, ಬುಮ್ರಾ ಅವರ ಲಭ್ಯತೆಯನ್ನು ಖಚಿತಪಡಿಸಿದರು ಹಾಗೂ ಆಕಾಶ್ದೀಪ್ ಅವರ ಫಿಟ್ನೆಸ್ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡರು.
‘‘ಜಸ್ಸಿ ಭಾಯ್(ಜಸ್ ಪ್ರಿತ್ ಬುಮ್ರಾ) ಆಡಲಿದ್ದಾರೆ. ಆಕಾಶ್ದೀಪ್ ತೊಡೆ ಸಂಧು ನೋವಿನಿಂದ ಬಳಲುತ್ತಿದ್ದು, ಅವರು ಇಂದು ಬೌಲಿಂಗ್ ಮಾಡಿದ್ದಾರೆ. ಈಗ ಫಿಜಿಯೋಗಳು ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಕಾಂಬಿನೇಶನ್ ಬದಲಾಗುತ್ತಿದೆ. ಆದರೆ ನಾವು ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಬೇಕಾಗಿದೆ’’ ಎಂದು ಸಿರಾಜ್ ವರದಿಗಾರರಿಗೆ ತಿಳಿಸಿದರು.
ಬುಮ್ರಾ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಕೆಲಸದ ಒತ್ತಡವನ್ನು ನಿಭಾಯಿಸಲು 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. 3ನೇ ಟೆಸ್ಟ್ ಪಂದ್ಯಕ್ಕೆ ವಾಪಸಾಗಿದ್ದರು. ಇದೇ ವೇಳೆ ಆಕಾಶ್ ದೀಪ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ 2ನೇ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಸಿರಾಜ್ ಈ ತನಕ ಎಲ್ಲ ಮೂರೂ ಪಂದ್ಯಗಳನ್ನು ಆಡಿದ್ದಾರೆ.
3 ಟೆಸ್ಟ್ ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಉರುಳಿಸಿರುವ ಸಿರಾಜ್, ಭಾರತದ ಬೌಲಿಂಗ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 4ನೇ ಟೆಸ್ಟ್ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರಿಸುವ ಇರಾದೆಯಲ್ಲಿದ್ದಾರೆ.
ತನ್ನ ಕೆಲಸದ ಒತ್ತಡವನ್ನು ನಿಭಾಯಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿರಾಜ್, ‘‘ದೇವರು ನನ್ನ ಆರೋಗ್ಯವನ್ನು ಚೆನ್ನಾಗಿ ಇಟ್ಟಿದ್ದಾರೆ. ಲಭಿಸಿದ ಅವಕಾಶಗಳನ್ನು ಬಳಸಿಕೊಂಡು, ದೇಶದ ಪರ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಆಡುವೆ’’ ಎಂದರು.
3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಸಿರಾಜ್, ‘‘ಬೆನ್ ಸ್ಟೋಕ್ಸ್ ತಲಾ 10 ಓವರ್ಗಳ ಎರಡು ಸ್ಪೆಲ್ ಗಳನ್ನು ಬೌಲ್ ಮಾಡಿದ್ದರು. ಅವರಿಗೆ ಹ್ಯಾಟ್ಸ್ ಆಫ್’’ ಎಂದರು.
ಭಾರತ ತಂಡವು ಲಾರ್ಡ್ಸ್ನಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ತನಕ ಹೋರಾಡಿ ಕೇವಲ 22 ರನ್ನಿಂದ ಸೋತಿತ್ತು. ಸಿರಾಜ್ ಬ್ಯಾಟಿಂಗ್ನಲ್ಲಿ ದಿಟ್ಟ ಪ್ರತಿರೋಧ ಒಡ್ಡಿದ್ದು, ಶುಐಬ್ ಬಶೀರ್ ಗೆ ವಿಕೆಟ್ ಒಪ್ಪಿಸುವ ಮೊದಲು 29 ಎಸೆತಗಳನ್ನು ಎದುರಿಸಿದ್ದರು.







