ಗಾಯದಿಂದ ಚೇತರಿಸಿಕೊಳ್ಳುವಲ್ಲಿ ವಿಫಲ: ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಕ್ಕೆ

ಜಸ್ಪ್ರೀತ್ ಬುಮ್ರಾ | Photo Credit : PTI
ಹೊಸದಿಲ್ಲಿ: ಶ್ರೀಲಂಕಾ ತಂಡದೆದುರು ನಡೆಯಲಿರುವ ಎರಡು ಟೆಸ್ಟ್ ಗಳ ಸರಣಿಗೂ ಮುನ್ನ ಭಾರತ ತಂಡಕ್ಕೆ ಹಿನ್ನಡೆಯಾಗಿದ್ದು, ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾಗಿರುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ಪ್ರವಾಸದಿಂದ ಹೊರ ಬಿದ್ದಿದ್ದಾರೆ. ಅವರು ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಚೇತರಿಸಿಕೊಳ್ಳುತ್ತಿದ್ದರು.
ದೈಹಿಕ ಸಾಮರ್ಥ್ಯದಲ್ಲಿ ತೇರ್ಗಡೆಯಾಗುವುದನ್ನು ಆಧರಿಸಿ ಜಸ್ಪ್ರೀತ್ ಬುಮ್ರಾರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ಎಲ್ಲ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಲಾಗಿತ್ತು. ಆದರೆ, ಅವರ ಮೊಣಕಾಲು ಗಾಯದ ಸಮಸ್ಯೆ ಮುಂದುವರಿದಿರುವುದರಿಂದ, ಬಿಸಿಸಿಐನ ವೈದ್ಯಕೀಯ ತಂಡ ಅವರನ್ನು ಶ್ರೀಲಂಕಾ ಪ್ರವಾಸದಿಂದ ಕೈಬಿಟ್ಟಿದೆ.
ಕಾರ್ಡಿಫ್ ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಎರಡನೆ ಏಕದಿನ ಪಂದ್ಯದಲ್ಲಿ 32 ವರ್ಷದ ಜಸ್ಪ್ರೀತ್ ಬುಮ್ರಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಅದರಿಂದ ಅವರ ಮೊಣಕಾಲು ಊದಿಕೊಂಡಿತ್ತು. ಹೀಗಾಗಿ, ಅವರು ಲಾರ್ಡ್ಸ್ ನಲ್ಲಿ ನಡೆದ ಮೂರನೆಯ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ, ಅವರನ್ನು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಚೇತರಿಕೆಗಾಗಿ ದಾಖಲಿಸಲಾಗಿತ್ತು.




