ತಾಂಝಾನಿಯಾದಲ್ಲಿ ಐಸಿಸಿ ಮಾನ್ಯತೆ ಇರುವ ಕ್ರಿಕೆಟ್ ಸ್ಟೇಡಿಯಂ ಉದ್ಘಾಟಿಸಿದ ಜಯ್ ಶಾ

Photo Credit : PTI
ಹೊಸದಿಲ್ಲಿ, ಆ.4: ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಅಧ್ಯಕ್ಷ ಜಯ್ ಶಾ ರವಿವಾರ ತಾಂಝಾನಿಯಾ ಕ್ರಿಕೆಟ್ ಅರೆನಾವನ್ನು (ಟಿಸಿಎ ಅರೆನಾ)ಉದ್ಘಾಟಿಸಿದರು. ಇದು ಆ ದೇಶದ ಕ್ರಿಕೆಟ್ ಪಯಣದ ಐತಿಹಾಸಿಕ ಮೈಲಿಗಲ್ಲಾಗಿದೆ.
ಇದು ತಾಂಝಾನಿಯಾದಲ್ಲಿ ಐಸಿಸಿ ಮಾನ್ಯತೆ ಹೊಂದಿರುವ ಮೊತ್ತ ಮೊದಲ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಪೂರ್ವ ಆಫ್ರಿಕಾದಲ್ಲಿ ಕ್ರೀಡೆಯ ಬೆಳವಣಿಗೆಗೆ ಇದು ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.
ಇದೇ ಮೊದಲ ಬಾರಿ ಐಸಿಸಿ ಅಧ್ಯಕ್ಷರೊಬ್ಬರು ತಾಂಝಾನಿಯಾಕ್ಕೆ ಭೇಟಿ ನೀಡಿ ಕ್ರಿಕೆಟ್ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್ ದೇಶಗಳ ಆಚೆಗೂ ಪಂದ್ಯದ ಹೆಜ್ಜೆಗಳನ್ನು ವಿಸ್ತರಿಸುವ ಐಸಿಸಿ ಬದ್ಧತೆಗೆ ಇದು ಪೂರಕವಾಗಿದೆ.
ಯುನಿವರ್ಸಿಟಿ ಆಫ್ ಡಾರ್ ಸೆ ಸಲಾಮ್ನಲ್ಲಿರುವ ಟಿಸಿಎ ಅರೆನಾವು ತಾಂಝಾನಿಯಾದ ಕ್ರಿಕೆಟ್ ತವರೂರು ಎನಿಸಿಕೊಳ್ಳಲಿದೆ. ಎರಡು ಅಂತರ್ರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಓವಲ್ಗಳ ಸಹಿತ ಆಧುನಿಕ ಸೌಲಭ್ಯಗಳು ಈ ಕ್ರೀಡಾಂಗಣದಲ್ಲಿದೆ.
2024ರ ಅಕ್ಟೋಬರ್ನಲ್ಲಿ ಸ್ಟೇಡಿಯಂಗೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. 2025ರ ಎಪ್ರಿಲ್ನಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿತ್ತು. 2026ರ ಜೂನ್ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.
2026ರ ಆಗಸ್ಟ್ 8ರಿಂದ 18ರ ತನಕ ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್ ಕಪ್ ಚಾಲೆಂಜ್ ಲೀಗ್ ಬಿ ನ ಆತಿಥ್ಯವಹಿಸುವ ಮೂಲಕ ನೂತನ ಕ್ರೀಡಾಂಗಣದಲ್ಲಿ ಮೊದಲ ಪ್ರಮುಖ ಅಂತರ್ರಾಷ್ಟ್ರೀಯ ಟೂರ್ನಮೆಂಟ್ ಆಯೋಜನೆಯಾಗಲಿದೆ.
ಈ ಪಂದ್ಯಾವಳಿಯು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗೆ ಪ್ರಮುಖ ಅರ್ಹತಾ ಟೂರ್ನಿಯಾಗಿದೆ.ಆತಿಥೇಯ ದೇಶವಾಗಿ ತಾಂಝಾನಿಯಾ ಚೊಚ್ಚಲ ಪಂದ್ಯವನ್ನಾಡುತ್ತಿರುವುದು ಈ ಪ್ರದೇಶದಲ್ಲಿ ಕ್ರಿಕೆಟ್ಗೆ ಪ್ರಮುಖ ಕ್ಷಣವಾಗಿದೆ.






