ಏಕೈಕ ಟೆಸ್ಟ್ | ಜೆಮಿಮಾ ರೋಡ್ರಿಗ್ಸ್ ಅರ್ಧಶತಕ : ಭಾರತ ಮಹಿಳಾ ತಂಡದ ವಿರುದ್ಧ ಆಸ್ಟ್ರೇಲಿಯಕ್ಕೆ ಅಲ್ಪ ಮುನ್ನಡೆ

ಜೆಮಿಮಾ ರೋಡ್ರಿಗ್ಸ್ | Photo Credit ; ANI
ಪರ್ತ್, ಮಾ.6: ಭಾರತ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಶುಕ್ರವಾರ ವಾಕಾ ಮೈದಾನದಲ್ಲಿ ಆರಂಭವಾದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ಗಳ ನಷ್ಟಕ್ಕೆ 96 ರನ್ ಗಳಿಸಿ 102 ರನ್ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯ ತಂಡ ಅಲ್ಪ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ ಒಟ್ಟು 13 ವಿಕೆಟ್ಗಳು ಪತನಗೊಂಡಿವೆ.
ತನ್ನ ಕೊನೆಯ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯದ ನಾಯಕಿ ಅಲಿನಾ ಹೀಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತವು 198 ರನ್ ಗಳಿಸಿ ಆಲೌಟಾಯಿತು. ಸ್ಮತಿ ಮಂಧಾನ(4 ರನ್)ವಿಕೆಟನ್ನು ಬೇಗನೆ ಕೆಡವಿದ ಲೂಸಿ ಹ್ಯಾಮಿಲ್ಟನ್ ತನ್ನ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದರು.
ಶೆಫಾಲಿ ವರ್ಮಾ(35 ರನ್) ಹಾಗೂ ಪ್ರತಿಕಾ ರಾವಲ್(18 ರನ್) ತಂಡದ ಸ್ಕೋರನ್ನು 50ರ ಗಡಿ ದಾಟಿಸಿದರು. ಆಲ್ರೌಂಡರ್ ಅನಬೆಲ್ ಸದರ್ಲ್ಯಾಂಡ್ 46 ರನ್ಗೆ ನಾಲ್ಕು ವಿಕೆಟ್ಗಳನ್ನು ಉರುಳಿಸಿದರು. ಆಗ ಭಾರತವು 107 ರನ್ಗೆ ಐದು ವಿಕೆಟ್ ಕಳೆದುಕೊಂಡಿತು.
ಜೆಮಿಮಾ ರೋಡ್ರಿಗ್ಸ್ ತನ್ನ ನಾಲ್ಕನೇ ಟೆಸ್ಟ್ ಅರ್ಧಶತಕ (52 ರನ್, 84 ಎಸೆತ, 7 ಬೌಂಡರಿ) ಗಳಿಸಿದ್ದಲ್ಲದೆ ರಿಚಾ ಘೋಷ್(11 ರನ್) ಅವರೊಂದಿಗೆ ಆರನೇ ವಿಕೆಟ್ಗೆ 43 ರನ್ ಜೊತೆಯಾಟ ನಡೆಸಿದರು. ಆದರೆ ಇಬ್ಬರು ಬ್ಯಾಟರ್ಗಳು ಸತತ ಓವರ್ಗಳಲ್ಲಿ ವಿಕೆಟ್ ಒಪ್ಪಿಸಿದರು. ಕಾಶ್ವೀ ಗೌತಮ್ ಔಟಾಗದೆ 34 ರನ್ ಗಳಿಸಿದರು. ಅಂತಿಮವಾಗಿ ಭಾರತ ಮೊದಲ ಇನಿಂಗ್ಸ್ನಲ್ಲಿ 198 ರನ್ಗೆ ಆಲೌಟಾಯಿತು.
ಸದರ್ಲ್ಯಾಂಡ್ ನಾಲ್ಕು ವಿಕೆಟ್ ಪಡೆದರೆ, ಹ್ಯಾಮಿಲ್ಟನ್(3-31) ಹಾಗೂ ಡಾರ್ಸಿ ಬ್ರೌನ್(2-41)ಒಟ್ಟಿಗೆ ಐದು ವಿಕೆಟ್ ಪಡೆದರು.
ಆಸ್ಟ್ರೇಲಿಯ ತಂಡದ ಎಲ್ಲಿಸ್ ಪೆರ್ರಿ(43 ರನ್)ಹಾಗೂ ಸದರ್ಲ್ಯಾಂಡ್(20 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತದ ಸಯಾಲಿ 24 ರನ್ಗೆ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.







