ಸ್ಪರ್ಧಾತ್ಮಕ ಅತ್ಲೆಟಿಕ್ಸ್ನಿಂದ ನಿವೃತ್ತಿ ಘೋಷಿಸಿದ ಜಿನ್ಸನ್ ಜಾನ್ಸನ್

ಜಿನ್ಸನ್ ಜಾನ್ಸನ್ | Photo Credit : PTI
ಹೊಸದಿಲ್ಲಿ: ಭಾರತದ ಮಧ್ಯಮ ದೂರದ ಓಟಗಾರ ಜಿನ್ಸನ್ ಜಾನ್ಸನ್ ಬುಧವಾರ ಸ್ಪರ್ಧಾತ್ಮಕ ಅತ್ಲೆಟಿಕ್ಸ್ನಿಂದ ನಿವೃತ್ತಿ ಘೋಷಿಸಿದ್ದಾರೆ.
‘‘ನಾನು ಸ್ಪರ್ಧಾತ್ಮಕ ಅತ್ಲೆಟಿಕ್ಸ್ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ವಿನಯಶೀಲತೆ, ಕೃತಜ್ಞತೆ ಮತ್ತು ಶಾಂತಿಯಿಂದ ನಿರ್ಗಮಿಸುತ್ತಿದ್ದೇನೆ. ಅತ್ಲೆಟಿಕ್ಸ್ ಟ್ರ್ಯಾಕ್ ನನಗೆ ಶಿಸ್ತು, ಪುಟಿದೇಳುವ ಪ್ರವೃತ್ತಿ ಮತ್ತು ಗೌರವ ಕೊಡುವುದನ್ನು ಕಲಿಸಿದೆ. ನಾನು ಓಟದಿಂದ ನಿವೃತ್ತಿಯಾಗುತ್ತಿದ್ದೇನಾದರೂ ಅತ್ಲೆಟಿಕ್ಸ್ ಯಾವತ್ತೂ ನನ್ನ ಹೃದಯದಲ್ಲಿ ಇರುತ್ತದೆ’’ ಎಂದು 34 ವರ್ಷದ ಜಿನ್ಸನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಜಿನ್ಸನ್ ಈಗ ಪುರುಷರ 1,500 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಅವರು ಮೂರು ಬಾರಿ ಏಶ್ಯನ್ ಗೇಮ್ಸ್ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಅವರು 1,500 ಮೀಟರ್ ಓಟದಲ್ಲಿ ಚಿನ್ನ ಗೆದ್ದರೆ, ಅದೇ ವರ್ಷದ ಏಶ್ಯನ್ ಗೇಮ್ಸ್ನಲ್ಲಿ, 800 ಮೀಟರ್ ಓಟದಲ್ಲಿ ಬೆಳ್ಳಿ ಜಯಿಸಿದ್ದಾರೆ. 2023ರ ಏಶ್ಯನ್ ಗೇಮ್ಸ್ನಲ್ಲಿ, 1500 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಅವರು 2016ರ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಆ ಮೂಲಕ, 36 ವರ್ಷಗಳಲ್ಲಿ ಒಲಿಂಪಿಕ್ಸೊಂದರ 800 ಮೀಟರ್ ಓಟದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಸೃಷ್ಟಿಸಿದರು. ಅದಕ್ಕೂ ಮೊದಲು, 1980ರಲ್ಲಿ ಶ್ರೀರಾಮ್ ಸಿಂಗ್ ಈ ಓಟ ವಿಭಾಗದಲ್ಲಿ ಸ್ಪರ್ಧಿಸಿದ್ದರು.
2018ರಲ್ಲಿ, ಜಿನ್ಸನ್, ಶ್ರೀರಾಮ್ ಸಿಂಗ್ರ ಪುರುಷರ 800 ಮೀಟರ್ ಓಟದ 42 ವರ್ಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು 800 ಮೀಟರ್ ಓಟವನ್ನು ಒಂದು ನಿಮಿಷ 45.65 ಸೆಕೆಂಡ್ನಲ್ಲಿ ಕ್ರಮಿಸಿದರು. ಬಳಿಕ, 2025ರಲ್ಲಿ ಈ ದಾಖಲೆಯನ್ನು ಮುಹಮ್ಮದ್ ಅಫ್ಸಲ್ ಮುರಿದರು.
ಕೇರಳ ಸಂಜಾತ ಅತ್ಲೀಟ್ ಈಗ 1,500 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ (ಮೂರು ನಿಮಿಷ 35.24 ಸೆಕೆಂಡ್)ಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಅವರು ಐಎಸ್ಟಿಎಎಫ್ ಬರ್ಲಿನ್ ಕ್ರೀಡಾಕೂಟದಲ್ಲಿ 2019ರಲ್ಲಿ ಸ್ಥಾಪಿಸಿದ್ದಾರೆ. ಈಗಲೂ ಈ ದೂರವನ್ನು 3 ನಿಮಿಷ 36 ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸುವ ಏಕೈಕ ಭಾರತೀಯ ಅವರಾಗಿದ್ದಾರೆ.
ಅವರು ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನಲ್ಲಿ, 800 ಮೀಟರ್ ಓಟದಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ. ಅವರು 2015ರಲ್ಲಿ ಬೆಳ್ಳಿ ಗೆದ್ದರೆ, 2017ರಲ್ಲಿ ಕಂಚು ಪಡೆದಿದ್ದಾರೆ.







