ಜೋ ರೂಟ್ ಅರ್ಧಶತಕ | 3ನೇ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ 153/2

ಜೋ ರೂಟ್ | PC : X
ಲಾರ್ಡ್ಸ್: ಮೂರನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 108 ರನ್ ಜೊತೆಯಾಟ ನಡೆಸಿದ ಜೋ ರೂಟ್(ಔಟಾಗದೆ 54) ಹಾಗೂ ಓಲಿ ಪೋಪ್(ಔಟಾಗದೆ 44) ಭಾರತ ಕ್ರಿಕೆಟ್ ತಂಡದ ವಿರುದ್ಧ್ದ ಗುರುವಾರ ಆರಂಭವಾದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಟೀ ವಿರಾಮದ ವೇಳೆಗೆ 2 ವಿಕೆಟ್ ಗಳ ನಷ್ಟಕ್ಕೆ 153 ರನ್ ಗಳಿಸಲು ನೆರವಾದರು.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್(23 ರನ್, 40 ಎಸೆತ)ಹಾಗೂ ಝ್ಯಾಕ್ ಕ್ರಾಲಿ(18 ರನ್, 43 ಎಸೆತ)13.3 ಓವರ್ಗಳಲ್ಲಿ 43 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು.
14ನೇ ಓವರ್ ನಲ್ಲಿ ದಾಳಿಗಿಳಿದ ನಿತೀಶ್ ಕುಮಾರ್ ರೆಡ್ಡಿ ಅವರು ಡಕೆಟ್ ಹಾಗೂ ಕ್ರಾಲಿ ವಿಕೆಟ್ ಗಳನ್ನು ಬೆನ್ನುಬೆನ್ನಿಗೆ ಉರುಳಿಸಿ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆವುಂಟು ಮಾಡಿದರು.
ಆಗ ಜೊತೆಯಾದ ರೂಟ್ ಹಾಗೂ ಪೋಪ್ 3ನೇ ವಿಕೆಟ್ ಗೆ 211 ಎಸೆತಗಳಲ್ಲಿ 109 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಹಿರಿಯ ಬ್ಯಾಟರ್ ರೂಟ್ ಅವರು ನಿತೀಶ್ ಕುಮಾರ್ ರೆಡ್ಡಿ ಅವರ ಬೌಲಿಂಗ್ ನಲ್ಲಿ ಬೌಂಡರಿ ಬಾರಿಸುವ ಮೂಲಕ 107 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ 67ನೇ ಅರ್ಧಶತಕ ಗಳಿಸಿದರು. ಟೆಸ್ಟ್ ಕ್ರಿಕೆಟ್ ನಲ್ಲಿ 103ನೇ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿ ಜಾಕ್ ಕಾಲಿಸ್ ಹಾಗೂ ರಿಕಿ ಪಾಂಟಿಂಗ್ರೊಂದಿಗೆ 2ನೇ ಸ್ಥಾನ ಹಂಚಿಕೊಂಡರು. ಸಚಿನ್ ತೆಂಡುಲ್ಕರ್(119)ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ರೂಟ್ ಅವರು ಭಾರತ ತಂಡದ ವಿರುದ್ಧ 3,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.







