ವೇಗವಾಗಿ 13 ಸಾವಿರ ರನ್ ಮೈಲುಗಲ್ಲು ದಾಟಿದ ದಾಖಲೆ ಮುರಿದ ಜೋ ರೂಟ್

PC: x.com/Mark_Cozy
ಟ್ರೆಂಟ್ಬ್ರಿಡ್ಜ್: ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಆರಂಭದ ದಿನ ಅತಿಥೇಯ ಇಂಗ್ಲೆಂಡ್ ತಂಡ ಪ್ರಾಬಲ್ಯ ಮೆರೆದದ್ದು ಮಾತ್ರವಲ್ಲದೇ, ವಿಶಿಷ್ಟ ದಾಖಲೆಯೊಂದನ್ನೂ ಸೃಷ್ಟಿಸಿತು. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ ಅವರು ದಕ್ಷಿಣ ಆಫ್ರಿಕಾದ ಜಾಕ್ವಿಸ್ ಕಾಲಿಸ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಗುರುವಾರ ಪುಡಿಗಟ್ಟಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿವೇಗದ 13 ಸಾವಿರ ರನ್ ಗಳಿಸಿದ ಹೆಗ್ಗಳಿಕೆ ರೂಟ್ ಅವರದ್ದಾಯಿತು. ಇಂಗ್ಲೆಂಡ್ ತಂಡದ ಝಕ್ ಕ್ರೇವ್ಲೆ, ಬೆನ್ ಡಕೆಟ್ ಮತ್ತು ಒಲ್ಲೀ ಪೋಪ್ ಹೀಗೆ ಮೂವರು ಶತಕ ಗಳಿಸಿದ ಸಾಧನೆಯನ್ನೂ ಮಾಡಿದರು.
ಅತಿವೇಗದ 13 ಸಾವಿರ ರನ್ ದಾಖಲೆ ಸ್ಥಾಪಿಸಲು 28 ರನ್ ಅಗತ್ಯವಿದ್ದ ರೂಟ್, 153ನೇ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದರು. ಕಾಲಿಸ್ ಈ ಮುನ್ನ 159 ಟೆಸ್ಟ್ ಗಳಲ್ಲಿ 13 ಸಾವಿರ ರನ್ ಗಳ ಮೈಲುಗಲ್ಲು ದಾಟಿದ್ದರು. ಪಂದ್ಯದ 80ನೇ ಓವರ್ ನಲ್ಲಿ ವಿಕ್ಟರ್ ಯೂಇಯವರ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ 34 ವರ್ಷದ ರೂಟ್ ಈ ಸಾಧನೆ ಮಾಡಿದರು. ಬ್ಲೆಸ್ಸಿಂಗ್ ಮುಜರಬಾನಿಯವರ ಎಸೆತದಲ್ಲಿ 34 ರನ್ ಗಳಿಗೆ ರೂಟ್ ವಿಕೆಟ್ ಒಪ್ಪಿಸಿದರು. ವಿಶ್ವ ಟೆಸ್ಟ್ ಇತಿಹಾಸದಲ್ಲಿ 13 ಸಾವಿರ ರನ್ ಗಡಿ ದಾಟಿದ ಐದನೇ ಆಟಗಾರ ಎಂಬ ಖ್ಯಾತಿಗೆ ರೂಟ್ ಪಾತ್ರರಾದರು.
ಸಚಿನ್ ತೆಂಡೂಲ್ಕರ್ (15,921), ರಿಕಿ ಪಾಂಟಿಂಗ್ (13,378), ಜಾಕ್ವಿಸ್ ಕಾಲಿಸ್ (13289) ಮತ್ತು ರಾಹುಲ್ ದ್ರಾವಿಡ್ (12,288) ಮಾತ್ರ ಈ ಮೊದಲು 13 ಸಾವಿರದ ಮೈಲುಗಲ್ಲು ದಾಟಿದ್ದಾರೆ.
ಈ ದಾಖಲೆಯ ಜತೆಗೆ ಇನ್ನೂ ಹಲವು ದಾಖಲೆಗಳು ಮೊದಲ ದಿನ ಸೃಷ್ಟಿಯಾದವು. ಬೆನ್ ಡಕೆಟ್ ಮತ್ತು ಝಕ್ ಕ್ರಾವ್ಲೆ ಜೋಡಿ ಜಿಂಬಾಬ್ವೆ ದಾಳಿಯನ್ನು ಪುಡಿಗಟ್ಟಿ ಮೊದಲ ವಿಕೆಟ್ ಗೆ 231 ರನ್ ಕಲೆ ಹಾಕಿದರು. ಇದು 1860ರ ಬಳಿಕ ಇಂಗ್ಲೆಂಡ್ನ ಆರಂಭಿಕ ಜೋಡಿಯ ಅತ್ಯಧಿಕ ಸ್ಕೋರ್ ಆಗಿದೆ.
ಡಕೆಟ್ 134 ಎಸೆತಗಳಲ್ಲಿ 140 ರನ್ ಗಳಿಸಿದರೆ ಕ್ರಾವ್ಲೆ 124 ರನ್ ಗಳಿಸಿ 28 ಇನಿಂಗ್ಸ್ ಗಳಲ್ಲಿ ಮೊದಲ ಶತಕ ಗಳಿಸಿದರು. ಆಕ್ರಮಣಕಾರಿ ಆಟ ಮುಂದುವರಿಸಿದ ಒಲ್ಲೀ ಪೋಪ್ 163 ಎಸೆತಗಳಲ್ಲಿ ಅಜೇಯ 169 ರನ್ ಗಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡ 3 ವಿಕೆಟ್ ಗೆ 498 ರನ್ ಗಳಿಸಿದ್ದು, ಟೆಸ್ಟ್ ಇತಿಹಾಸಲ್ಲೇ ಮೊದಲ ದಿನ ತವರಿನ ಅಂಗಳದಲ್ಲಿ ಗಳಿಸಿದ ಗರಿಷ್ಠ ರನ್ ಇದಾಗಿದೆ.







