ವಿಚಿತ್ರವಾಗಿ ಔಟಾದ ಜೋ ರೂಟ್!
ನೆದರ್ಲ್ಯಾಂಡ್ಸ್ ನ ಲೋಗನ್ ವಾನ್ ಬೀಕ್ ಎಸೆತದಲ್ಲಿ ನಡೆದ ಘಟನೆ

Photo: twitter/hamxashahbax21
ಹೊಸದಿಲ್ಲಿ : ಪ್ರತಿಯೊಂದು ದೊಡ್ಡ ಪಂದ್ಯಾವಳಿಗಳಲ್ಲಿ ದೊಡ್ಡ ಹೊಡೆತಗಳು, ಶ್ರೇಷ್ಟ ಕ್ಯಾಚ್ಗಳು ಮತ್ತು ಅಮೋಘ ವಿಕೆಟ್ ಪತನಗಳು ಇದ್ದೇ ಇರುತ್ತವೆ. ಜೊತೆಗೆ ಬ್ಯಾಟರ್ಗಳು ವಿಚಿತ್ರ ರೀತಿಯಲ್ಲಿ ಔಟಾಗುವ ಘಟನೆಗಳೂ ನಡೆಯುತ್ತವೆ. ಪ್ರಸಕ್ತ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಬ್ಯಾಟರ್ ಒಬ್ಬರು ವಿಚಿತ್ರ ರೀತಿಯಲ್ಲಿ ಔಟಾಗಿದ್ದಾರೆ.
ಪುಣೆಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ, ನೆದರ್ಲ್ಯಾಂಡ್ಸ್ನ ವೇಗದ ಬೌಲರ್ ಲೋಗನ್ ವಾನ್ ಬೀಕ್ ಎಸೆತದಲ್ಲಿ ಔಟಾಗಿದ್ದು ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಗೊತ್ತೇ ಆಗಲಿಲ್ಲ.
ಇದು ಇನಿಂಗ್ಸ್ನ 21ನೇ ಓವರ್ನಲ್ಲಿ ಸಂಭವಿಸಿತು. ವಾನ್ ಬೀಕ್ರ ಲೆಂತಿ ಎಸೆತವನ್ನು ರಿವರ್ಸ್ ಹಿಟ್ ಮಾಡಲು ರೂಟ್ ಮುಂದಾದರು. ಚೆಂಡನ್ನು ಥರ್ಡ್ ಮ್ಯಾನ್ ಕಡೆಗೆ ಬಾರಿಸುವ ಪ್ರಯತ್ನವನ್ನು ರೂಟ್ ಮಾಡಿದರು. ಆದರೆ, ಚೆಂಡಿಗೆ ಬ್ಯಾಟ್ ತಾಗಿಸುವಲ್ಲಿ ಅವರು ವಿಫಲರಾದರು. ಚೆಂಡು ನಿರೀಕ್ಷಿಸಿದಷ್ಟು ಪುಟಿಯಲಿಲ್ಲ. ಚೆಂಡು ಅಂತಿಮವಾಗಿ ರೂಟ್ರ ಕಾಲುಗಳ ನಡುವೆ ತೂರಿಕೊಂಡು ಹೋಗಿ ವಿಕೆಟ್ಗಳಿಗೆ ಬಡಿಯಿತು.
20ನೇ ಓವರ್ನ ಬಳಿಕ ವಾನ್ ಬೀಕ್ರನ್ನು ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಬೌಲಿಂಗ್ಗೆ ಮರಳಿ ಕರೆತಂದರು. ಅವರು ತನ್ನ ಮೊದಲ ಕಂತಿನಲ್ಲಿ, ನಾಲ್ಕು ಓವರ್ಗಳಲ್ಲಿ 45 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ, ಈ ಬಾರಿ ಅವರು ಎದುರಾಳಿ ತಂಡದ ಮೇಲೆ ತಕ್ಷಣ ಪ್ರಹಾರಗೈದರು. ಆ ಮೂಲಕ ಡೇವಿಡ್ ಮಲಾನ್ ಮತ್ತು ರೂಟ್ರ 85 ರನ್ಗಳ ಎರಡನೇ ವಿಕೆಟ್ ಭಾಗೀದಾರಿಕೆಯನ್ನು ಮುರಿದರು.







