ಇತಿಹಾಸ ನಿರ್ಮಿಸಿದ ಜೋಸ್ ಬಟ್ಲರ್ : ಪೊಲಾರ್ಡ್ರ ಸಾರ್ವಕಾಲಿಕ ಟಿ-20 ರನ್ ದಾಖಲೆ ಪತನ

ಜೋಸ್ ಬಟ್ಲರ್ | Credit: X/@ManchesterSG100
ಲಂಡನ್, ಆ.6: ವೆಸ್ಟ್ಇಂಡೀಸ್ ಬ್ಯಾಟಿಂಗ್ ದಿಗ್ಗಜ ಕಿರೊನ್ ಪೊಲಾರ್ಡ್ರ ದಾಖಲೆಯನ್ನು ಮುರಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಪುರುಷರ ಟಿ-20 ಕ್ರಿಕೆಟ್ನ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
ಓಲ್ಡ್ ಟ್ರಾಫೋರ್ಡ್ನಲ್ಲಿ ದ ಹಂಡ್ರೆಡ್ ಟೂರ್ನಿಯಲ್ಲಿ ವೆಲ್ಶ್ ಫೈಯರ್ ವಿರುದ್ಧ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್ ಪರ ಬ್ಯಾಟಿಂಗ್ ವೇಳೆ ಬಟ್ಲರ್ ಈ ಸಾಧನೆ ಮಾಡಿದರು.
ಬಟ್ಲರ್ ಕೇವಲ 20 ಎಸೆತಗಳಲ್ಲಿ ಔಟಾಗದೆ 51 ರನ್ ಗಳಿಸಿ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್ ತಂಡವು 156 ರನ್ ಗುರಿಯನ್ನು ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ ಚೇಸ್ ಮಾಡುವಲ್ಲಿ ನೆರವಾದರು. ಈ ವೇಳೆ ಪೊಲಾರ್ಡ್ರ ದೀರ್ಘ ಕಾಲದ ದಾಖಲೆಯನ್ನು ಹಿಂದಿಕ್ಕಿ ಸಾರ್ವಕಾಲಿಕ ಟಿ-20 ರನ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮಾರ್ಕೊ ಜಾನ್ಸನ್ ಬೌಲಿಂಗ್ನಲ್ಲಿ ಸತತ ಮೂರು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಬಟ್ಲರ್ ಆಕರ್ಷಕ ಶೈಲಿಯಲ್ಲಿ ಈ ಸ್ಮರಣೀಯ ಕ್ಷಣ ತಲುಪಿದರು. ಮೊದಲ ಸಿಕ್ಸರ್ ಸಿಡಿಸಿದ ನಂತರ ಪೊಲಾರ್ಡ್ರ ದಾಖಲೆ ಮುರಿದರು.
ಇಂಗ್ಲೆಂಡ್ನ ವಿಕೆಟ್ಕೀಪರ್-ಬ್ಯಾಟರ್ ಇದೀಗ 522 ಟಿ-20 ಪಂದ್ಯಗಳಲ್ಲಿ 9 ಶತಕಗಳು ಹಾಗೂ 105 ಅರ್ಧಶತಕಗಳ ಸಹಿತ ಒಟ್ಟು 14,833 ರನ್ ಗಳಿಸಿದ್ದಾರೆ. ಇದರೊಂದಿಗೆ ಪೊಲಾರ್ಡ್(746 ಪಂದ್ಯಗಳಲ್ಲಿ 14,803 ರನ್)ದಾಖಲೆಯನ್ನು ಮುರಿದರು.
ಟಿ-20 ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್ ಎಂದೇ ಪ್ರತೀತಿ ಪಡೆದಿರುವ ವೆಸ್ಟ್ಇಂಡೀಸ್ನ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ 22 ಶತಕಗಳ ಸಹಿತ 463 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದಾರೆ.
ಲಾಕಿ ಫರ್ಗುಸನ್ ಬೌಲಿಂಗ್ನಲ್ಲಿ ಇನ್ನೂ ಎರಡು ಸಿಕ್ಸರ್ಗಳನ್ನು ಸಿಡಿಸಿರುವ ಬಟ್ಲರ್ ಅರ್ಧಶತಕವನ್ನು ಪೂರೈಸಿ ಸೂಪರ್ಜಯಂಟ್ಸ್ ತಂಡವು 9 ವಿಕೆಟ್ಗಳ ಅಂತರದಿಂದ ಜಯ ಗಳಿಸುವಲ್ಲಿ ನೆರವಾದರು.
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಈಗಾಗಲೇ ಅತ್ಯಂತ ವಿದ್ವಂಸಕ ಬ್ಯಾಟರ್ ಎನಿಸಿಕೊಂಡಿರುವ ಬಟ್ಲರ್ ಟಿ-20 ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ತನ್ನ ಯಶಸ್ವಿ ವೃತ್ತಿಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.






