ಸತತ ಏಳನೇ ಬಾರಿ Asian Games ಗೆ ಜೋಶ್ನಾ ಚಿನ್ನಪ್ಪ ಅರ್ಹತೆ

ಜೋಶ್ನಾ ಚಿನ್ನಪ್ಪ | Photo Credit : thehindu.com
ಹೊಸದಿಲ್ಲಿ, ಜೂ.14: ಹಿರಿಯ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಸತತ ಏಳನೇ ಬಾರಿ ಏಶ್ಯನ್ ಗೇಮ್ಸ್ಗೆ ಅರ್ಹತೆ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಐಎಸ್ಟಿಎ ಅಕಾಡೆಮಿಯಲ್ಲಿ ನಡೆದ ಗೇಮ್ಸ್ ಆಯ್ಕೆ ಟ್ರಯಲ್ಸ್ನಲ್ಲಿ ಐದು ಗೇಮ್ಗಳ ಹಣಾಹಣಿಯಲ್ಲಿ ಉನ್ನತಿ ತ್ರಿಪಾಠಿ ಅವರನ್ನು ಮಣಿಸಿದ 39 ವರ್ಷದ ಜೋಶ್ನಾ ಏಶ್ಯನ್ ಗೇಮ್ಸ್ ಗೆ ಅರ್ಹತೆ ಪಡೆದರು.
ಋತಿಕಾ ಸೀಲನ್, ಅಕ್ಷಾಂಶ ಸಾಲುಂಕೆ, ಉನ್ನತಿ ಹಾಗೂ ಪೂಜಾ ಆರತಿ ಅವರನ್ನೊಳಗೊಂಡ ಪ್ರತಿಭಾವಂತ ಯುವ ಆಟಗಾರ್ತಿಯರ ಗುಂಪಿನಿಂದ ಜೋಶ್ನಾ ತೀವ್ರ ಸ್ಪರ್ಧೆ ಎದುರಿಸಿದರು.
‘‘ಒಂದೇ ದಿನ ಎರಡು ಪಂದ್ಯಗಳನ್ನು ಆಡುವುದು ಕಷ್ಟಕರ. ಸಾಮಾನ್ಯವಾಗಿ ದಿನಕ್ಕೆ ಒಂದು ಪಂದ್ಯ ಇರುತ್ತದೆ. ಋತಿಕಾ, ಪೂಜಾ ಹಾಗೂ ಇತರ ಆಟಗಾರ್ತಿಯರು ಇಲ್ಲಿ ತರಬೇತಿ ಪಡೆದಿದ್ದಾರೆ. ನಾನು ಎಲ್ಲ ಪಂದ್ಯಗಳನ್ನು ಗೆಲ್ಲಲು ಬಯಸಿದ್ದೆ. ನನ್ನ ಪ್ರದರ್ಶನದ ಬಗ್ಗೆ ಖುಷಿಯಿದೆ. ಭಾರತವನ್ನು ಏಶ್ಯನ್ ಗೇಮ್ಸ್ನಲ್ಲಿ ಪ್ರತಿನಿಧಿಸುವುದು ವಿಶೇಷ ಅನುಭವ’’ ಎಂದು ನಾಲ್ಕು ಬಾರಿಯ ಏಶ್ಯನ್ ಚಾಂಪಿಯನ್ ಜೋಶ್ನಾ ಹೇಳಿದರು.




