ಮಹಿಳೆಯರು, ಪುರುಷರ ಜೂನಿಯರ್ ಹಾಕಿ ಏಶ್ಯ ಕಪ್ : ಭಾರತ ತಂಡಗಳಿಗೆ ಸತತ 3ನೇ ಬಾರಿ ಪ್ರಶಸ್ತಿ

Picture by Asian Hockey Federation
ಮೋಕಿ (ಚೀನಾ): ಚೀನಾದ ಮೋಕಿಯಲ್ಲಿ ನಡೆದ ಮಹಿಳೆಯರ ಮತ್ತು ಪುರುಷರ ಜೂನಿಯರ್ ಹಾಕಿ ಏಶ್ಯ ಕಪ್ ಪಂದ್ಯಾವಳಿಯಲ್ಲಿ, ರವಿವಾರ ಎರಡೂ ವಿಭಾಗಗಳಲ್ಲಿ ಭಾರತ ಸತತ ಮೂರನೇ ಬಾರಿಗೆ ಪ್ರಶಸ್ತಿಗಳನ್ನು ಜಯಿಸಿದೆ.
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಭಾರತ ಚೀನಾವನ್ನು 1-0 ಗೋಲಿನಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.
ಪಂದ್ಯದ ಏಕೈಕ ಗೋಲನ್ನು ಭಾರತದ ಸನಿಕಾ ಮಾಣೆ 17ನೇ ನಿಮಿಷದಲ್ಲಿ ಬಾರಿಸಿದರು. ಈ ಪ್ರಶಸ್ತಿಯೊಂದಿಗೆ, ಭಾರತವು ಮುಂದಿನ ವರ್ಷ ನಡೆಯಲಿರುವ ಎಫ್ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.
ಪುರುಷರ ವಿಭಾಗದ ಫೈನಲ್ನಲ್ಲಿ, ಭಾರತವು ದಕ್ಷಿಣ ಕೊರಿಯವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಮುಂದಿನ ವರ್ಷ ನಡೆಯಲಿರುವ ಎಫ್ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಭಾರತದ ನಾಯಕ ಅನ್ಮೋಲ್ ಎಕ್ಕಾ ಮತ್ತು ಅಜಿತ್ ಯಾದವ್ ತಲಾ ಒಂದು ಗೋಲು ಗಳಿಸಿದರೆ, ಎರಡನೇ ಕ್ವಾರ್ಟರ್ನಲ್ಲಿ ಪ್ರಭ್ದೀಪ್ ಸಿಂಗ್ ಮತ್ತೊಂದು ಗೋಲು ಸೇರಿಸಿ ಮುನ್ನಡೆಯನ್ನು ಹೆಚ್ಚಿಸಿದರು.
ಬಳಿಕ 50ನೇ ನಿಮಿಷದಲ್ಲಿ ಆಶು ಮೌರ್ಯ ಗಳಿಸಿದ ಗೋಲು ಭಾರತದ ಗೆಲುವನ್ನು ಖಚಿತಪಡಿಸಿತು. ಇದಾದ ನಾಲ್ಕು ನಿಮಿಷಗಳ ನಂತರ ಕೊರಿಯಾ ತಂಡದ ನಾಯಕ ಲೀ ಮಿನ್ಹ್ಯೋಕ್ ಒಂದು ಸಮಾಧಾನಕರ ಗೋಲು ಬಾರಿಸಿದರು.






