ಕಿವೀಸ್ ವಿರುದ್ಧ ಜುರೆಲ್ ಏಕಾಂಗಿ ಹೋರಾಟ: 246ಕ್ಕೆ ಕುಸಿದ ಭಾರತ
ನ್ಯೂಝಿಲೆಂಡ್ ಗೆ 133 ರನ್ ಗಳ ಮುನ್ನಡೆ

Photo credit : X@BCCI
ಕ್ರೈಸ್ಟ್ಚರ್ಚ್: ಧ್ರುವ್ ಜುರೆಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹೊರತಾಗಿಯೂ ನ್ಯೂಝಿಲೆಂಡ್ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 246 ರನ್ಗಳಿಗೆ ಆಲೌಟ್ ಆಗಿದೆ. ಇದರಿಂದ ಮೊದಲ ಇನ್ನಿಂಗ್ಸ್ನಲ್ಲಿ 110 ರನ್ ಗಳ ಮುನ್ನಡೆ ಪಡೆದಿದ್ದ ನ್ಯೂಝಿಲೆಂಡ್, ಎರಡನೇ ಇನ್ನಿಂಗ್ಸ್ನಲ್ಲೂ ಒಂದು ವಿಕೆಟ್ ನಷ್ಟಕ್ಕೆ 23 ರನ್ ಗಳಿಸುವ ಮೂಲಕ ತನ್ನ ಒಟ್ಟು ಮುನ್ನಡೆಯನ್ನು 133 ರನ್ ಗಳಿಗೆ ಹೆಚ್ಚಿಸಿಕೊಂಡಿದೆ.
ಭಾರತದ ಪರ ಧ್ರುವ್ ಜುರೆಲ್ 170 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 88 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಇತರ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೂ ಜುರೆಲ್ ಏಕಾಂಗಿ ಹೋರಾಟ ನಡೆಸಿದರು. ಅವರಿಗೆ ಆಕಾಶ್ ದೀಪ್ ಉತ್ತಮ ಸಾಥ್ ನೀಡಿದರು. ಆಕಾಶ್ ದೀಪ್ 52 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿದರು.
ಕೆ.ಎಲ್. ರಾಹುಲ್ 80 ಎಸೆತಗಳಲ್ಲಿ 25, ರಿಷಭ್ ಪಂತ್ 39 ಎಸೆತಗಳಲ್ಲಿ 23, ದೇವದತ್ತ್ ಪಡಿಕ್ಕಲ್ 20 ಎಸೆತಗಳಲ್ಲಿ 21 ಹಾಗೂ ನಾಯಕ ಶುಭಮನ್ ಗಿಲ್ 29 ಎಸೆತಗಳಲ್ಲಿ 17 ರನ್ ಗಳಿಸಿದರು. ಗುರ್ನೂರ್ ಬ್ರಾರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 10 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ನಾಲ್ಕು ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ ಮತ್ತು ಅಂಶುಲ್ ಕಂಬೋಜ್ ರನ್ ಗಳಿಸದೆ ಔಟಾದರು.
ಭಾರತ 86.1 ಓವರ್ಗಳಲ್ಲಿ 246 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ನ್ಯೂಝಿಲೆಂಡ್ ಪರ ಕೈಲ್ ಜೇಮಿಸನ್ 69 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಮ್ಯಾಟ್ ಹೆನ್ರಿ 58 ರನ್ ನೀಡಿ ಎರಡು, ನಾಥನ್ ಸ್ಮಿತ್ 54 ರನ್ ನೀಡಿ ಎರಡು ಹಾಗೂ ಜಾಕೋಬ್ ಡಫಿ 57 ರನ್ ನೀಡಿ ಎರಡು ವಿಕೆಟ್ ಪಡೆದರು. ರಚಿನ್ ರವೀಂದ್ರ ಮೂರು ಓವರ್ ಗಳಲ್ಲಿ ಎರಡು ರನ್ ನೀಡಿದರು.
ಎರಡನೇ ಇನ್ನಿಂಗ್ಸ್ ನಲ್ಲೂ ಕಿವೀಸ್ ಗೆ ಮುನ್ನಡೆ :
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಝಿಲೆಂಡ್ ಮೂರನೇ ದಿನದ ಎರಡನೇ ಸೆಷನ್ ನ ವೇಳೆಗೆ 6.5 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ. ಟಾಮ್ ಲ್ಯಾಥಮ್ 15 ಎಸೆತಗಳಲ್ಲಿ ಎಂಟು ರನ್ ಗಳಿಸಿ ಔಟಾಗಿದ್ದಾರೆ. ಡೆವೊನ್ ಕಾನ್ವೇ 22 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಿತ 13 ರನ್ ಗಳಿಸಿ ಅಜೇಯರಾಗಿದ್ದಾರೆ. ಹೆನ್ರಿ ನಿಕೋಲ್ಸ್ ನಾಲ್ಕು ಎಸೆತಗಳಲ್ಲಿ ಒಂದು ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಭಾರತದ ಪರ ಜಸ್ಪ್ರೀತ್ ಬುಮ್ರಾ 3.5 ಓವರ್ ಗಳಲ್ಲಿ 14 ರನ್ ನೀಡಿ ಒಂದು ವಿಕೆಟ್ ಪಡೆದರೆ, ಅಂಶುಲ್ ಕಂಬೋಜ್ ಮೂರು ಓವರ್ ಗಳಲ್ಲಿ ಎಂಟು ರನ್ ನೀಡಿದ್ದಾರೆ.
ಕ್ರೈಸ್ಟ್ ಚರ್ಚ್ ನ ಹ್ಯಾಗ್ಲಿ ಪಾರ್ಕ್ ಸೌತ್ನಲ್ಲಿ ನಡೆಯುತ್ತಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೂರನೇ ದಿನದ ಎರಡನೇ ಸೆಷನ್ ನ ವೇಳೆಗೆ ನ್ಯೂಝಿಲೆಂಡ್ 133 ರನ್ಗಳ ಮುನ್ನಡೆ ಹೊಂದಿದೆ.






