ಕಳಿಂಗ ಸೂಪರ್ ಕಪ್ ಫೈನಲ್: ಈಸ್ಟ್ ಬೆಂಗಾಲ್ ಗೆ ರೋಚಕ ಜಯ

Photo: twitter.com/90ndstoppage
ಭುವನೇಶ್ವರ: ಅತಿಥೇಯ ಒಡಿಶಾ ಫುಟ್ಬಾಲ್ ಕ್ಲಬ್ ತಂಡವನ್ನು ರೋಚಕ ಹೋರಾಟದಲ್ಲಿ 3-2 ಅಂತರದಿಂದ ಸೋಲಿಸುವ ಮೂಲಕ ಬಲಿಷ್ಠ ಈಸ್ಟ್ ಬೆಂಗಾಲ್ ತಂಡ ಸೂಪರ್ ಕಪ್ ಜಯಿಸಿದೆ. ಕ್ಲೀಟನ್ ಸಿಲ್ವಾ ನಿರ್ಣಾಯಕ ಗೋಲು ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು.
ಉಭಯ ತಂಡಗಳಿಗೆ ಗೋಲು ಗಳಿಸುವ ಹಲವು ಅವಕಾಶಗಳು ಲಭ್ಯವಾದರೂ, ನಿಗದಿತ ಅವಧಿ ಮುಕ್ತಾಯದ ವೇಳೆಗೆ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಅವಧಿಯ ಮೊದಲಾರ್ಧದಲ್ಲಿ ಕೂಡಾ ಇದೇ ಸ್ಥಿತಿ ಮುಂದುವರಿಯಿತು. ಆದರೆ ಪಂದ್ಯದ 111ನೇ ನಿಮಿಷದಲ್ಲಿ ಬ್ರೆಜಿಲ್ ಮೂಲದ ಕ್ಲೀಟನ್, ಈಸ್ಟ್ ಬೆಂಗಾಲ್ ಪರ ಗೆಲುವಿನ ಗೋಲು ಬಾರಿಸಿದರು.
ಇದು ಈ ಬಲಿಷ್ಠ ತಂಡಕ್ಕೆ 12 ವರ್ಷಗಳ ಬಳಿಕ ದೊರಕಿದ ಮೊದಲ ಪ್ರಶಸ್ತಿಯಾಗಿದೆ. 15 ಪಂದ್ಯಗಳಲ್ಲಿ ಅಜೇಯ ಓಟ ಮುಂದುರಿಸಿದ್ದ ಒಡಿಶಾ ಫುಟ್ಬಾಲ್ ಕ್ಲಬ್ ಈ ಬಾರಿ ಕೂಡಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೂ ಈಸ್ಟ್ ಬೆಂಗಾಲ್ ತಂಡ ಕೂಡಾ ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿತ್ತು.
ರಾಯ್ ಕೃಷ್ಣ ಅವರ ಪಾಸ್ ಅನ್ನು ಉತ್ತಮವಾಗಿ ಗುರಿ ಸೇರಿಸುವ ಮೂಲಕ ಮರೀಶಿಯೊ ಒಡಿಶಾ ತಂಡದ ಪರ ಗೋಲಿನ ಖಾತೆ ತೆರೆದರು. ವಿರಾಮದ ಅವಧಿಗೆ ಮುನ್ನಡೆಯನ್ನು ಕಾಯ್ದುಕೊಂಡ ಒಡಿಶಾ ಮೇಲುಗೈ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಪೂರ್ವಬಂಗಾಲ ದಾಳಿ ಆರಂಭಿಸಿ, ಮಹೇಶದ್ ನಂದಕುಮಾರ್ ಶೇಖರ್ ಆಕರ್ಷಕವಗಿ ಚೆಂಡನ್ನು ನೆಟ್ ಒಳಗೆ ಸೇರಿಸುವ ಮೂಲಕ ಸಮಬಲಕ್ಕೆ ಕಾರಣರಾದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶವನ್ನು ಸಾಲ್ ಕ್ರೆಸ್ಪೊ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.







