ಐಪಿಎಲ್ 2026: ಲಕ್ನೊ ತಂಡಕ್ಕೆ ಕೇನ್ ವಿಲಿಯಮ್ಸನ್ ಸೇರ್ಪಡೆ

ಕೇನ್ ವಿಲಿಯಮ್ಸನ್ | Photo Credit : PTI
ಹೊಸದಿಲ್ಲಿ, ಅ.16: ನ್ಯೂಝಿಲ್ಯಾಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ 2026ರ ಆವೃತ್ತಿಯ ಐಪಿಎಲ್ಗಿಂತ ಮೊದಲು ಹೊಸ ಕಾರ್ಯತಂತ್ರದ ಸಲಹೆಗಾರನಾಗಿ ನಮ್ಮ ಫ್ರಾಂಚೈಸಿಯನ್ನು ಸೇರಲಿದ್ದಾರೆ ಎಂದು ಲಕ್ನೊ ಸೂಪರ್ ಜಯಂಟ್ಸ್ ಮಾಲಿಕ ಸಂಜೀವ್ ಗೊಯೆಂಕಾ ಘೋಷಿಸಿದ್ದಾರೆ.
2025ರ ಆವೃತ್ತಿಯ ಐಪಿಎಲ್ನಲ್ಲಿ ರಿಷಭ್ ಪಂತ್ರಂತಹ ವಿಶ್ವ ಕ್ರಿಕೆಟಿನ ಶ್ರೇಷ್ಠ ಆಟಗಾರರಿದ್ದರೂ ಲಕ್ನೊ ತಂಡವು 7ನೇ ಸ್ಥಾನ ಪಡೆದು ಭಾರೀ ನಿರಾಸೆಗೊಳಿಸಿತ್ತು. ಈಬಾರಿ ತನ್ನ ಹಿಂದಿನ ತಪ್ಪನ್ನು ಸರಿಪಡಿಸಿಕೊಳ್ಳುವತ್ತ ಚಿತ್ತಹರಿಸಿದೆ. ಪಂತ್ ಅವರು ಹರಾಜಿನ ವೇಳೆ 27 ಕೋ.ರೂ.ಗೆ ಲಕ್ನೊ ತಂಡದ ಪಾಲಾಗಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದರು.
‘‘ಕೇನ್ ವಿಲಿಯಮ್ಸನ್ ಸೂಪರ್ ಜಯಂಟ್ಸ್ ಕುಟುಂಬದ ಭಾಗವಾಗಿದ್ದಾರೆ. ಅವರನ್ನು ಹೊಸ ಪಾತ್ರದಲ್ಲಿ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ. ಅವರ ನಾಯಕತ್ವ, ಕಾರ್ಯತಂತ್ರದ ಒಳನೋಟ, ಆಟದ ಬಗ್ಗೆ ಆಳವಾದ ತಿಳುವಳಿಕೆ ಹಾಗೂ ಆಟಗಾರರನ್ನು ಪ್ರೇರೇಪಿಸುವ ಸಾಮರ್ಥ್ಯವು ತಂಡಕ್ಕೆ ಹೊಸ ಶಕ್ತಿ ನೀಡಲಿದೆ’’ ಎಂದು ‘ಎಕ್ಸ್’ನಲ್ಲಿ ಗೊಯೆಂಕಾ ಬರೆದಿದ್ದಾರೆ.
ಕಳೆದ ಋತುವಿನಲ್ಲಿ ಲಕ್ನೊ ತಂಡದ ಸಲಹೆಗಾರನಾಗಿದ್ದ ಝಹೀನ್ ಖಾನ್ ಬದಲಿಗೆ ವಿಲಿಯಮ್ಸನ್ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿತ್ತು.
ಸಕ್ರಿಯ ಅಂತರ್ರಾಷ್ಟ್ರೀಯ ಕ್ರಿಕೆಟಿಗನಾಗಿರುವ 35ರ ವಯಸ್ಸಿನ ವಿಲಿಯಮ್ಸನ್ ಫ್ರಾಂಚೈಸಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುವ ಉದ್ದೇಶದಿಂದ ನ್ಯೂಝಿಲ್ಯಾಂಡ್ ತಂಡದ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದರು. ತನ್ನ ಅಮೋಘ ವೃತ್ತಿಜೀವನದಲ್ಲಿ 105 ಟೆಸ್ಟ್ ಪಂದ್ಯಗಳಲ್ಲಿ 9,276 ರನ್ ಹಾಗೂ 173 ಏಕದಿನ ಪಂದ್ಯದಲ್ಲಿ 7,236 ರನ್ ಗಳಿಸಿದ್ದರು.
ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸಿದ್ದರು. 2018ರಲ್ಲಿ ಫೈನಲ್ ಪಂದ್ಯದಲ್ಲಿ ಆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಇದೀಗ ಲಕ್ನೊದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಜೊತೆಗೆ ತಂಡದ ಕ್ರಿಕೆಟ್ ನೀಲನಕ್ಷೆಯನ್ನು ರೂಪಿಸಲಿದ್ದಾರೆ.







