ಯು.ಎಸ್. ಓಪನ್ | ಚೊಚ್ಚಲ ಪ್ರಶಸ್ತಿ ಗೆದ್ದ ಕನ್ನಡಿಗ ಆಯುಷ್ ಶೆಟ್ಟಿ
ರನ್ನರ್-ಅಪ್ಗೆ ತೃಪ್ತಿಪಟ್ಟ ತನ್ವಿ ಶರ್ಮಾ

ಆಯುಷ್ ಶೆಟ್ಟಿ |PC : X \ @BAI_Media
ನ್ಯೂಯಾರ್ಕ್: ಅಮೆರಿಕದ ಲೋವಾದಲ್ಲಿ ನಡೆದ ಯು.ಎಸ್. ಓಪನ್ ಸೂಪರ್ 300 ಟೂರ್ನಿಯ ಫೈನಲ್ ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ರನ್ನು ನೇರ ಗೇಮ್ ಗಳ ಅಂತರದಿಂದ ಮಣಿಸಿರುವ ಕನ್ನಡಿಗ ಆಯುಷ್ ಶೆಟ್ಟಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿದ್ದಾರೆ.
20ರ ವಯಸ್ಸಿನ ಆಯುಷ್ ಶೆಟ್ಟಿ ರವಿವಾರ 47 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ವಿಶ್ವದ ನಂ.33ನೇ ಆಟಗಾರ ಯಾಂಗ್ರನ್ನು 21-18, 21-13 ಗೇಮ್ ಗಳ ಅಂತರದಿಂದ ಮಣಿಸಿದರು.
ಸದ್ಯ ವಿಶ್ವ ರ್ಯಾಂಕಿಂಗ್ನಲ್ಲಿ 34ನೇ ಸ್ಥಾನದಲ್ಲಿರುವ ಆಯುಷ್ ಈ ವರ್ಷ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ವಿದೇಶಿ ನೆಲದಲ್ಲಿ ಭಾರತ ತಂಡವು ಕೆಲ ಸಮಯದಿಂದ ಎದುರಿಸುತ್ತಿದ್ದ ಪುರುಷರ ಸಿಂಗಲ್ಸ್ ಪ್ರಶಸ್ತಿ ಬರವನ್ನು ನೀಗಿಸಿದ್ದಾರೆ. 2023ರಲ್ಲಿ ಲಕ್ಷ್ಯ ಸೇನ್ ಕೆನಡಾ ಓಪನ್ನಲ್ಲಿ ಪ್ರಶಸ್ತಿ ಗೆದ್ದ ನಂತರ ಭಾರತದ ಬ್ಯಾಡ್ಮಿಂಟನ್ ಆಟಗಾರರು ವಿದೇಶಿ ನೆಲದಲ್ಲಿ ಫೈನಲ್ ನಲ್ಲಿ ಗೆಲುವು ದಾಖಲಿಸಿರಲಿಲ್ಲ.
2023ರ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಆಯುಷ್ ಈ ವಾರದ ತನ್ನ ಶ್ರೇಷ್ಠ ಪ್ರದರ್ಶನವನ್ನು ಪ್ರಶಸ್ತಿ ಎತ್ತುವುದರೊಂದಿಗೆ ಅಂತ್ಯಗೊಳಿಸಿದರು.
ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರ ಡೆನ್ಮಾರ್ಕ್ ನ ಮ್ಯಾಗ್ನಸ್ ಜೋಹಾನ್ ಸೆನ್ ರನ್ನು 21-17, 21-19 ಗೇಮ್ ಗಳ ಅಂತರದಿಂದ ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದರು. ಅಂತಿಮ-16ರ ಸುತ್ತಿನಲ್ಲಿ ತಮ್ಮದೇ ದೇಶದ ತರುಣ್ ಮನ್ನೆಪಲ್ಲಿ ಅವರನ್ನು 21-12, 13-21, 21-15 ಗೇಮ್ ಗಳ ಅಂತರದಿಂದ ಸೋಲಿಸಿದರು.
ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂ.70ನೇ ಆಟಗಾರ ಕುವೊ ಕುಯಾನ್ ಲಿನ್ರನ್ನು 22-20, 21-9 ಅಂತರದಿಂದ ಸೋಲಿಸಿದ್ದಾರೆ.
6.5 ಅಡಿ ಎತ್ತರದ ಕರ್ನಾಟಕದ ಶಟ್ಲರ್ ಸೆಮಿ ಫೈನಲ್ ನಲ್ಲಿ ವಿಶ್ವದ ನಂ.6ನೇ ಆಟಗಾರ ಚೌ ಟಿಯೆನ್ ಚೆನ್ ರಿಂದ ಕಠಿಣ ಸವಾಲು ಎದುರಾಗಿತ್ತು. ತೈಪೆ ಓಪನ್ನ ಸೆಮಿ ಫೈನಲ್ ನಲ್ಲಿ ಆಯುಷ್ ಅವರು ಹಿರಿಯ ಆಟಗಾರ ಚೆನ್ ಗೆ ಸೋತಿದ್ದರು.
67 ನಿಮಿಷಗಳ ಕಾಲ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಆಯುಷ್ ಅವರು ಚೆನ್ ವಿರುದ್ಧ ಆರಂಭಿಕ ಗೇಮ್ ಅನ್ನು 21-23 ಅಂತರದಿಂದ ಸೋತಿದ್ದರು. ಈ ಹಿನ್ನಡೆಯಿಂದ ಬೇಗನೆ ಚೇತರಿಸಿಕೊಂಡ ಆಯುಷ್ ಉಳಿದೆರಡು ಗೇಮ್ ಗಳನ್ನು 21-15 ಹಾಗೂ 21-14 ಗೇಮ್ ಗಳ ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು.
►ತನ್ವಿ ಶರ್ಮಾಗೆ ಫೈನಲ್ ನಲ್ಲಿ ಸೋಲು
ಇದೇ ವೇಳೆ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ 16ರ ಹರೆಯದ ಆಟಗಾರ್ತಿ ತನ್ವಿ ಶರ್ಮಾ ಅಗ್ರ ಶ್ರೇಯಾಂಕದ ಹಾಗೂ ಸ್ಥಳೀಯ ಫೇವರಿಟ್ ಬೀವೆನ್ ಝಾಂಗ್ ವಿರುದ್ಧ 11-21, 21-16, 10-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ವಿಶ್ವದ ನಂ.21ನೇ ಆಟಗಾರ್ತಿ ಝಾಂಗ್ ವಿರುದ್ಧ ಫೈನಲ್ ಪಂದ್ಯವನ್ನು ಸೋತಿದ್ದರೂ ತನ್ವಿ ಅವರು ಪಂದ್ಯಾವಳಿಯುದ್ದಕ್ಕೂ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ತನ್ವಿ ಅವರು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಟೂರ್ನಿಯಲ್ಲಿ ಫೈನಲ್ ತಲುಪಿದ ಭಾರತದ ಕಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದರು.
ಕಳೆದ ವರ್ಷ ಏಶ್ಯನ್ ಟೀಮ್ ಚಾಂಪಿಯನ್ಶಿಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದ ವಿಶ್ವದ ನಂ.66ನೇ ಆಟಗಾರ್ತಿ ತನ್ವಿ, ಮೊದಲ ಸುತ್ತಿನ ಪಂದ್ಯದಲ್ಲಿ ವಿಯೆಟ್ನಾಂನ ಎರಡನೇ ಶ್ರೇಯಾಂಕದ ಗುಯೆನ್ ಲಿನ್ಹ್ರನ್ನು 21-19, 21-19 ಗೇಮ್ ಗಳ ಅಂತರದಿಂದ ಮಣಿಸಿದರು.
ತನ್ವಿ 2ನೇ ಸುತ್ತಿನಲ್ಲಿ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್, ಥಾಯ್ಲೆಂಡ್ನ ಪಿಚಮೊನ್ರನ್ನು 21-18, 21-16 ಅಂತರದಿಂದ ಮಣಿಸಿದ್ದರು. ಕರುಪಥೆವನ್ ಲೆಶಾನಾರನ್ನು 21-13, 21-6 ಅಂತರದಿಂದ ಮಣಿಸಿದ್ದ ತನ್ವಿ ಸೆಮಿ ಫೈನಲ್ಗೆ ತಲುಪಿದ್ದರು. ಸೆಮಿ ಫೈನಲ್ ನಲ್ಲಿ ಉಕ್ರೇನ್ನ ಪೊಲಿನಾ ಬುಹ್ರೋವಾ ಎದುರು ಪ್ರಾಬಲ್ಯ ಮೆರೆದು 21-14, 21-16 ಅಂತರದಿಂದ ಜಯ ಸಾಧಿಸಿದರು.
►ಫೈನಲ್ಸ್ ಸ್ಕೋರ್ಗಳು
►ಪುರುಷರ ಸಿಂಗಲ್ಸ್
ಬ್ರಿಯಾನ್ ಯಾಂಗ್(ಕೆನಡಾ)ವಿರುದ್ಧ ಆಯುಷ್ ಶೆಟ್ಟಿಗೆ 21-18, 21-13 ಅಂತರದ ಗೆಲುವು
►ಮಹಿಳೆಯರ ಸಿಂಗಲ್ಸ್
ತನ್ವಿ ಶರ್ಮಾ(ಭಾರತ)ವಿರುದ್ಧ ಬೀವೆನ್ ಝಾಂಗ್ಗೆ (ಅಮೆರಿಕ)21-11, 16-21, 21-10 ಅಂತರದ ಗೆಲುವು







