ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿದ ಕರೆನ್ ಖಚನೊವ್

Photo: twitter \ @le_stade
ಲಂಡನ್, ಜೂ.23: ವಿಶ್ವದ 11ನೇ ರ್ಯಾಂಕಿನ ಆಟಗಾರ ಕರೆನ್ ಖಚನೊವ್ ಮುಂಬರುವ ವಿಂಬಲ್ಡನ್ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ. ರಶ್ಯದ ಟೆನಿಸ್ ಆಟಗಾರ ಶುಕ್ರವಾರ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಫ್ರೆಂಚ್ ಓಪನ್ ವೇಳೆ ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.
ಫ್ರೆಂಚ್ ಓಪನ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಖಚನೊವ್ ಕ್ವಾರ್ಟರ್ ಫೈನಲ್ ಗೆ ತಲುಪಿದ್ದರು. ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ನೊವಾಕ್ ಜೊಕೊವಿಕ್ ವಿರುದ್ಧ ಒಂದು ಸೆಟನ್ನು ಗೆಲ್ಲಲು ಶಕ್ತರಾಗಿದ್ದರು. ದುರದೃಷ್ಟವಶಾತ್ ಅವರನ್ನು ಕಾಡಿದ ಗಾಯದ ಸಮಸ್ಯೆಯು ಪ್ರದರ್ಶನ ಮೇಲೆ ಪರಿಣಾ ಮಬೀರಿದ್ದು, ಸರ್ಬಿಯ ಆಟಗಾರನ ವಿರುದ್ಧ ಸೋತಿದ್ದಾರೆ. 27ರ ಹರೆಯದ ಖಚನೊವ್ ಕಳೆದ 12 ತಿಂಗಳುಗಳಿಂದ ಗ್ರಾನ್ಸ್ಲಾಮ್ ಟೂರ್ನಿಯಲ್ಲಿ ಫಾರ್ಮ್ ನಲ್ಲಿರುವ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಕಳೆದ ವರ್ಷದ ಅಮೆರಿಕನ್ ಓಪನ್ ಹಾಗೂ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ನಲ್ಲಿ ಸೆಮಿ ಫೈನಲ್ ತಲುಪಿದ್ದರು. ‘‘ಫ್ರೆಂಚ್ ಓಪನ್ ವೇಳೆ ನನ್ನನ್ನು ಕಾಡಿದ ಗಾಯದ ಸಮಸ್ಯೆಯ ಕಾರಣಕ್ಕೆ ನನಗೆ ಸತತ 2ನೇ ವರ್ಷ ವಿಂಬಲ್ಡನ್ ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಈ ವಾರದ ತನಕವೂ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದೆ. ನನ್ನ ಗಾಯದ ವಿಚಾರದಲ್ಲಿ ಇದು ಸಾಧ್ಯವಿಲ್ಲ ಎಂದು ವೈದ್ಯಕೀಯ ತಂಡ ದೃಢಪಡಿಸಿದೆ’’ ಎಂದು ಖಚನೊವ್ ತಿಳಿಸಿದ್ದಾರೆ.
ರಶ್ಯ ಹಾಗೂ ಬೆಲಾರುಸ್ ಆಟಗಾರರ ಮೇಲೆ ನಿಷೇಧ ವಿಧಿಸಿದ್ದ ಹಿನ್ನೆಲೆಯಲ್ಲಿ ಖಚನೊವ್ ಕಳೆದ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಈ ವರ್ಷದ ಚಾಂಪಿಯನ್ಶಿಪ್ನಲ್ಲಿ ನಿಷೇಧವನ್ನು ಹಿಂಪಡೆಯಲಾಗಿದ್ದು, ಎರಡೂ ದೇಶಗಳ ಆಟಗಾರರು ತಟಸ್ಥರಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.