ಕರ್ನಾಟಕ ಕ್ರೀಡಾಕೂಟ 2025–26 | ಬಾಸ್ಕೆಟ್ಬಾಲ್: ಯಂಗ್ ಒರಿಯನ್ಸ್, ಮೈಸೂರು ಚಾಂಪಿಯನ್ಸ್

ಸಾಂದರ್ಭಿಕ ಚಿತ್ರ | Photo Credit : freepik
ತುಮಕೂರು, ಜ. 21: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025–26ರ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಯಂಗ್ ಒರಿಯನ್ಸ್ ಮತ್ತು ಮೈಸೂರು ತಂಡಗಳು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ಗಳಾಗಿವೆ.
ಸಿದ್ದಾರ್ಥ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಯಂಗ್ ಒರಿಯನ್ಸ್ ತಂಡ 5 ಅಂಕಗಳ ಅಂತರದಿಂದ ಬ್ಯಾಂಕ್ ಆಫ್ ಬರೋಡಾ ತಂಡವನ್ನು ಮಣಿಸಿ ಸ್ವರ್ಣ ಪದಕ ಗೆದ್ದುಕೊಂಡಿತು.
ಆಟದ ಕೊನೆಯವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಯಂಗ್ ಒರಿಯನ್ಸ್ 76–71 ಅಂಕಗಳಿಂದ ರೋಚಕ ಜಯ ದಾಖಲಿಸಿತು. ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ ಯಂಗ್ ಒರಿಯನ್ಸ್, ಮೊದಲಾರ್ಧದಲ್ಲಿ 39–30 ಅಂಕಗಳಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಬ್ಯಾಂಕ್ ಆಫ್ ಬರೋಡಾ ತೀವ್ರ ಪ್ರತಿರೋಧ ಒಡ್ಡಿದರೂ ವೀರೋಚಿತ ಸೋಲು ಅನುಭವಿಸಿತು.
ಯಂಗ್ ಒರಿಯನ್ಸ್ ಪರ ಅಭಿಷೇಕ್ 24 ಹಾಗೂ ಗೌತಮ್ 16 ಅಂಕ ಗಳಿಸಿ ಗೆಲುವಿನ ರೂವಾರಿಗಳಾದರು. ಬ್ಯಾಂಕ್ ಆಫ್ ಬರೋಡಾ ಪರ ಕಾರ್ತಿಕೇಯನ್ 18 ಮತ್ತು ಹರೀಶ್ 14 ಅಂಕ ಗಳಿಸಿ ಗಮನ ಸೆಳೆದರು. ಜಿಎಸ್ಟಿ ಕಸ್ಟಮ್ಸ್ ತಂಡವನ್ನು 49–28 ಅಂಕಗಳಿಂದ ಸೋಲಿಸಿದ ಡಿವೈಇಎಸ್ ಬೆಂಗಳೂರು ತಂಡ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿತು.
ಮಹಿಳೆಯರ ಫೈನಲ್ ಪಂದ್ಯದಲ್ಲಿ ಡಿವೈಇಎಸ್ ವಿದ್ಯಾನಗರ ತಂಡವನ್ನು ಮಣಿಸಿದ ಡಿವೈಇಎಸ್ ಮೈಸೂರು ತಂಡ ಬಂಗಾರದ ಪದಕಕ್ಕೆ ಕೊರಳೊಡ್ಡಿತು. ಸಾನಿಕ (10 ಅಂಕ) ಮತ್ತು ಸಾಧನ (8 ಅಂಕ) ಅವರ ಉತ್ತಮ ಆಟದ ನೆರವಿನಿಂದ ಮೈಸೂರು ತಂಡ 30–18 ಅಂಕಗಳಿಂದ ಜಯಭೇರಿ ಬಾರಿಸಿತು. ಮಂಡ್ಯ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.







