ಶತಕ ಸಿಡಿಸಿ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ನೀಡಿದ ಕರುಣ್ ನಾಯರ್

ಕರುಣ್ ನಾಯರ್ | Photo Credit : PTI
ಶಿವಮೊಗ್ಗ, ಅ.26: ಕರುಣ್ ನಾಯರ್(ಔಟಾಗದೆ 174 ರನ್, 267 ಎಸೆತ, 14 ಬೌಂಡರಿ, 3 ಸಿಕ್ಸರ್)ಭರ್ಜರಿ ಶತಕ ಸಿಡಿಸುವ ಮೂಲಕ ಭಾರತೀಯ ಟೆಸ್ಟ್ ತಂಡದಿಂದ ತನ್ನನ್ನು ಹೊರಗಿಟ್ಟಿರುವ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದರು. ನಾಯರ್ ಶತಕದ ಬಲದಿಂದ ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಗೋವಾ ತಂಡದ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 371 ರನ್ ಗಳಿಸಿ ಆಲೌಟಾಗಿದೆ.
ನವುಲೆಯ ಕೆಎಸ್ಸಿಎನಲ್ಲಿ ರವಿವಾರ 2ನೇ ದಿನದಾಟದಂತ್ಯಕ್ಕೆ ಗೋವಾ ತಂಡ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದು, ಸುಯಶ್ ಪ್ರಭುದೇಸಾಯಿ(11 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಂಥನ್ ಖಟ್ಕರ್(9) ಅಭಿಲಾಷ್ ಶೆಟ್ಟಿಗೆ ವಿಕೆಟ್ ಒಪ್ಪಿಸಿದ್ದಾರೆ.
ಇದಕ್ಕೂ ಮೊದಲು 5 ವಿಕೆಟ್ ಗಳ ನಷ್ಟಕ್ಕೆ 222 ರನ್ ಗಳಿಸಿದ ಕರ್ನಾಟಕ ತಂಡದ ಪರ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್(57 ರನ್, 109 ಎಸೆತ, 6 ಬೌಂಡರಿ, 1 ಸಿಕ್ಸರ್) 6ನೇ ವಿಕೆಟ್ಗೆ 117 ರನ್ ಜೊತೆಯಾಟ ನಡೆಸಿದರು. 48 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಗೋಪಾಲ್ 57 ರನ್ ಗಳಿಸಿ ಔಟಾದರು.
86 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯರ್ ಔಟಾಗದೆ 174 ರನ್ ಗಳಿಸಿ ತಂಡದ ಪರ ಏಕಾಂಗಿ ಹೋರಾಟ ನೀಡಿದರು. ವಿಜಯಕುಮಾರ್(31 ರನ್, 53 ಎಸೆತ) ಜೊತೆ 8ನೇ ವಿಕೆಟ್ಗೆ 60 ರನ್ ಸೇರಿಸಿ ತಂಡದ ಮೊತ್ತವನ್ನು 330ರ ಗಡಿ ದಾಟಿಸಿದರು.
ಕೊನೆಯ ಆಟಗಾರ ವಿದ್ವತ್ ಕಾವೇರಪ್ಪ ಔಟಾದ ಕಾರಣ ಕರುಣ್ಗೆ ದ್ವಿಶತಕ ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಸುತ್ತಿನ ಪಂದ್ಯದಲ್ಲಿ 73 ರನ್ ಗಳಿಸಿದ್ದ ನಾಯರ್ ಮತ್ತೊಂದು ಆಕರ್ಷಕ ಇನಿಂಗ್ಸ್ ಮೂಲಕ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಮರಳುವ ಪ್ರಯತ್ನ ಮುಂದುವರಿಸಿದ್ದಾರೆ.
2024-25ರ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯರ್ 8 ವರ್ಷಗಳ ನಂತರ ಜೂನ್ ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ವಾಪಸಾಗಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇನಲ್ಲಿ ನಿವೃತ್ತಿಯಾದಾಗ 3ನೇ ಕ್ರಮಾಂಕಕ್ಕೆ ನಾಯರ್ ಆಯ್ಕೆಯಾಗಿದ್ದರು. 33ರ ಹರೆಯದ ನಾಯರ್ ಸ್ವದೇಶದಲ್ಲಿ ವಿಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಆಯ್ಕೆಯಾಗಿರಲಿಲ್ಲ.
ಗೋವಾದ ಪರ ಅರ್ಜುನ್ ತೆಂಡುಲ್ಕರ್(3-100)ಹಾಗೂ ವಾಸುಕಿ ಕೌಶಿಕ್(3-35)ತಲಾ 3 ವಿಕೆಟ್ ಗಳನ್ನು ಪಡೆದರು.
►ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್: 371 ರನ್ ಗೆ ಆಲೌಟ್
(ಕರುಣ್ ನಾಯರ್ ಔಟಾಗದೆ 174, ಶ್ರೇಯಸ್ ಗೋಪಾಲ್ 57, ಮನೋಹರ್ 37, ವಿಜಯಕುಮಾರ್ 31, ಅರ್ಜುನ್ ತೆಂಡುಲ್ಕರ್ 3-100, ವಾಸುಕಿ ಕೌಶಿಕ್ 3-35)
ಗೋವಾ ಮೊದಲ ಇನಿಂಗ್ಸ್: 28/1
(ಸುಯಶ್ ಪ್ರಭುದೇಸಾಯಿ ಔಟಾಗದೆ 11, ಅಭಿಲಾಷ್ ಶೆಟ್ಟಿ 1-9)







