ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 5ನೇ ದ್ವಿಶತಕ ದಾಖಲಿಸಿದ ಕರುಣ್ ನಾಯರ್

ಕರುಣ್ ನಾಯರ್ | Photo Credit : PTI
ತಿರುವನಂತಪುರ, ನ.2: ಕೇರಳ ವಿರುದ್ಧ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಬಿ ಗುಂಪಿನ 3ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಕರುಣ್ ನಾಯರ್ ದ್ವಿಶತಕ ದಾಖಲಿಸಿದರು. ಟೀಮ್ ಇಂಡಿಯಾ ಹಾಗೂ ಭಾರತ ‘ಎ’ ತಂಡದಿಂದ ಹೊರಗಿಡಲ್ಪಟ್ಟಿರುವ ನಾಯರ್, ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಗೆ ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸಿದರು.
ನಾಯರ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಐದನೇ ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಗಳಿಸಿದ್ದಾರೆ. ಈ ವರ್ಷಾರಂಭದಲ್ಲಿ ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ಪರವಾಗಿ ನಾಯರ್ ದ್ವಿಶತಕ ಗಳಿಸಿದ್ದರು. 33ರ ವಯಸ್ಸಿನ ಆಟಗಾರ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ನಲ್ಲಿ 2024ರಲ್ಲಿ ನಾರ್ಥಾಂಪ್ಟನ್ಶೈರ್ ಪರವಾಗಿ ಔಟಾಗದೆ 202 ರನ್ ಗಳಿಸಿದ್ದರು.
ನಾಯರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಗಳಿಸಿದ ಭಾರತದ 2ನೇ ಬ್ಯಾಟರ್ ಆಗಿದ್ದಾರೆ. 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 303 ರನ್ ಗಳಿಸಿದ್ದಾರೆ.
ಕೇರಳ ವಿರುದ್ಧ ತನ್ನ ಇನಿಂಗ್ಸ್ನ ಮೂಲಕ ನಾಯರ್ ಅವರು ಕರ್ನಾಟಕದ ಪರ ಉತ್ತಮ ಪ್ರದರ್ಶನ ಮುಂದುವರಿಸಿದರು. ವಿದರ್ಭ ತಂಡದ ಪರ ಎರಡು ವರ್ಷ ಆಡಿದ್ದ ನಾಯರ್ ಈ ವರ್ಷ ಕರ್ನಾಟಕ ತಂಡಕ್ಕೆ ಮರಳಿದ್ದರು. ಈ ವರ್ಷದ ರಣಜಿಯ ಮೊದಲ ಸುತ್ತಿನಲ್ಲಿ ಸೌರಾಷ್ಟ್ರ ವಿರುದ್ಧ ಅರ್ಧಶತಕ ಗಳಿಸಿದ್ದ ನಾಯರ್ 2ನೇ ಸುತ್ತಿನಲ್ಲಿ ಗೋವಾ ತಂಡದ ವಿರುದ್ಧ ಔಟಾಗದೆ 174 ರನ್ ಗಳಿಸಿದ್ದರು.







